ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ರೆಖ್ಯ ಗ್ರಾಮದ ಪೆಂಚಾರು ಹರಿಯುವ ತೋಡಿನ ಬಳಿ ಅರಸಿನಮಕ್ಕಿ ಪೇಟೆಯ ತ್ಯಾಜ್ಯವನ್ನು ಪಂಚಾಯತ್ ನ ಘನ ತ್ಯಾಜ್ಯ ಘಟಕದ ವಿಲೇವಾರಿ ವಾಹನದಲ್ಲಿ ಎಸೆಯುತ್ತಿದ್ದಾಗ ಗ್ರಾಮಸ್ಥರು ತಡೆ ಹಿಡಿದು ಧರಣಿ ನಡೆಸಿದ ಘಟನೆ ಮೇ.16 ರಂದು ನಡೆದಿದೆ.
ಈ ಪ್ರದೇಶದಲ್ಲಿ ಪ್ರತೀ ವರ್ಷವೂ ತ್ಯಾಜ್ಯವನ್ನು ಎಸೆಯಲಾಗುತ್ತಿತ್ತು. ರಾತ್ರಿ ವೇಳೆ ಬಂದು ಎಸೆದು ಹೋಗುತ್ತಿದ್ದರೂ, ಕಾದು ಕುಳಿತಿದ್ದರೂ ಸಿಗುತ್ತಿರಲಿಲ್ಲ. ಸುಮಾರು 30ರಿಂದ 40 ಲೋಡ್ ತ್ಯಾಜ್ಯ ಎಸೆಯಲಾಗಿದೆ. ಅರಣ್ಯ ಇಲಾಖೆ ತ್ಯಾಜ್ಯ ಎಸೆದವರನ್ನು ಹಿಡಿಯಲು ಪ್ರಯತ್ನಿಸಿದ್ದರೂ ವಿಫಲವಾಗಿದ್ದರು. ಅರಸಿನಮಕ್ಕಿ ಉಪ್ಪರಡ್ಕದಿಂದ ಪಿಲಿಕಬೆ,ತಾರೆತಪಡು, ಕೆರೆಜಾಲು, ಮೊರಂತಡ್ಕ ಸಹಿತ ಮೂರು ಕಿ.ಮೀ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಸ ಎಸೆಯಲಾಗುತ್ತಿತ್ತು.
ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆಗೆ ಮುಂದಾದೆವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೇ.16 ರಂದು ಮಂಗಳವಾರ ಅರಸಿನಮಕ್ಕಿ ಗ್ರಾಮಸ್ಥರಾದ ತುಕಾರಾಮ್ ಜಿ.ಎಸ್, ನಾರಾಯಣ, ಪ್ರಕಾಶ್, ವೇಣುಗೋಪಾಲ್, ಇತರರು ತ್ಯಾಜ್ಯ ಎಸೆಯುವಾಗ ತಡೆಹಿಡಿದು ಧರಣಿ ನಡೆಸಿದ್ದಾರೆ.
ಈ ಕುರಿತು ಅರಣ್ಯ ಇಲಾಖಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬಂದಿ ಬಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಧರಣಿಯನ್ನು ಹಿಂಪಡೆಯಲಾಗಿದೆ.
ಅರಸಿನಮಕ್ಕಿ ವಿಭಾಗದ ಉಪ ವಲಯಾರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಹಿಂದೆ ಈ ಪ್ರದೇಶದಲ್ಲಿದ್ದ ಕಸವನ್ನು ಗಮನಿಸಿ ಕಾಡು ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕಸಗಳನ್ನು ಜೆಸಿಪಿ ಯಂತ್ರವನ್ನು ತರಿಸಿ ಸ್ವಚ್ಛ ಮಾಡಲಾಗಿತ್ತು ಹಾಗೂ ಇನ್ನು ಮುಂದಕ್ಕೆ ಕಸಗಳನ್ನು ಎಸೆಯಂತೆ ಅರಿವನ್ನು ಮೂಡಿಸಲಾಗಿತ್ತು ಅಲ್ಲದೆ ಕಸ ಎಸೆಯವರ ಪತ್ತೆ ಕಾರ್ಯಕ್ಕೂ ಮುಂದಾಗಿದ್ದರು.
ಹಲವು ಬಾರಿ ಈ ಅರಣ್ಯದೊಳಗೆ ತ್ಯಾಜ್ಯವನ್ನು ರಾಶಿ ಹಾಕಬೇಡಿ ಎಂದು ಸಂಬಂಧಪಟ್ಟರಿಗೆ ತಿಳಿಸಿದ್ದೆವು ಹಾಗೂ ಇತ್ತೀಚೆಗೆ ಮನವಿಯನ್ನು ಕೂಡ ನೀಡಿದ್ದೆವು. ಅಷ್ಟಾದರೂ ಕೂಡ ಪೇಟೆಗಳಲ್ಲಿ ಸಂಗ್ರಹವಾದ ಕಸವನ್ನು ತಂದು ಈ ಕಾಡಿನೊಳಗೆ ಸುರಿಯುತ್ತಿದ್ದರು. ಘಟನೆಯಿಂದ ಬೇಸತ್ತು ನಾವೆಲ್ಲ ಪ್ರತಿಭಟನೆ ನಡೆಸಿದಾಗ, ಮುಂದಿನ ದಿನಗಳಲ್ಲಿ ತ್ಯಾಜ್ಯವನ್ನು ಸುರಿಯುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು. ಆದರೆ ಮೇ.12 ರಂದು ಅದೇ ಜಾಗದಲ್ಲಿ ಮತ್ತೆ ಪಂಚಾಯತ್‌ನ ತ್ಯಾಜ್ಯ ವಿಲೇವಾರಿ ಮಾಡುವ ವಾಹನದಲ್ಲಿಯೇ ತ್ಯಾಜ್ಯವನ್ನು ತಂದು ಸುರಿದಿರುವುದು ವಿಷಾದನೀಯ. ಈ ಬಗ್ಗೆ ದಾಖಲೆ ಸಮೇತ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಲಿದ್ದೇವೆ.
ತುಕರಾಮ್ ಗುಡ್ರಾದಿ
ಗ್ರಾಮಸ್ಥರು.
.