ಚಾರ್ಮಾಡಿ: ಕೊಟ್ಟಿಗೆಹಾರದಿಂದ ಮಂಗಳೂರು ಹೋಗುವ ಮಾರ್ಗ ಮಧ್ಯೆ ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಬುಧವಾರ ಸಂಜೆ ಒಂಟಿ ಸಲಗವೊಂದು ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರಿಗೆ, ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ.
ಸಂಜೆ 4.30 ಗಂಟೆ ಸಮಯದಲ್ಲಿ ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಕಾಡಾನೆಯೊಂದು ರಸ್ತೆಗೆ ಪ್ರವೇಶಿಸಿದೆ ಈ ವೇಳೆ ಈ ಮಾರ್ಗದಲ್ಲಿ ಬರುತ್ತಿದ್ದ ಮಂಗಳೂರು ಹಾಸನ ಸರ್ಕಾರಿ ಬಸ್ ಚಾಲಕ ಆನೆಯನ್ನು ಗಮನಿಸಿ ಕೊಂಚ ದೂರದಲ್ಲಿ ಬಸ್ಸನ್ನು ನಿಲ್ಲಿಸಿದ್ದಾನೆ. ಕೆಲ ಸಮಯದ ಬಳಿಕ ರಸ್ತೆಯಲ್ಲಿದ್ದ ಆನೆ ರಸ್ತೆಯ ಮತ್ತೊಂದು ಭಾಗಕ್ಕೆ ಹೋಗಿ ನಿಂತಿದೆ.
ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಆನೆ ರಸ್ತೆಯ ಅಂಚಿಗೆ ಬಂದು ಮರದ ಬಳಿ ನಿಂತ ಬಳಿಕ ಬಸ್ಸು ಹಾಗೂ ಇತರ ವಾಹನಗಳು ನಿಧಾನವಾಗಿ ಸಾಗಿದವು, ರಸ್ತೆ ಬದಿಯಲ್ಲೇ ಆನೆ ನಿಂತಿದ್ದರಿಂದ ಕೆಲವು ದ್ವಿಚಕ್ರ ವಾಹನ ಸವಾರರು ಭಯಪಡುವಂತಾಯಿತು.
ಅರಣ್ಯ ಅಧಿಕಾರಿಗಳು ಚಾರ್ಮಾಡಿ ಘಾಟಿನಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ನಿರ್ಬಂಧಿಸಿ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.