ಮಂಗಳೂರು: ಕುಮ್ಕಿ ಹಕ್ಕು ಪಡೆಯುವ ಬಗ್ಗೆ ಈ ಬಾರಿ ಆಶಾ ಭಾವನೆ ಹೊಂದಿದ್ದ ಕರಾವಳಿಯ ಕೃಷಿಕರು ಸರಕಾರ ಬದಲಾವಣೆಯಿಂದ ಇನ್ನೇನಾಗಬಹುದೋ ಎನ್ನುವ ಆತಂಕದಲ್ಲಿದ್ದಾರೆ.
ಹಿಂದೆ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ 2013ರಲ್ಲಿ ಕುಮ್ಕಿ ಹಕ್ಕು ನೀಡುವ ಕುರಿತ ಸಚಿವ ಸಂಪುಟ ನಿರ್ಧಾರವನ್ನು ಕೈಗೊಂಡಿತ್ತು. ಆದರೆ 2013ರಿಂದ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಸರಕಾರ ಹಿಂದಿನ ಸರಕಾರದ ನಿರ್ಣಯವನ್ನು ಜಾರಿಗೊಳಿಸಲು ಆಸಕ್ತಿ ತೋರಿಸಿರಲಿಲ್ಲ. ಕುಮ್ಕಿ ಹಕ್ಕು ನೀಡಿದರೆ ಸರಕಾರಿ ಭೂಮಿ ಸಿಗದಾದೀತು ಎನ್ನುವ ಚಿಂತನೆ ಅದಕ್ಕೆ ಕಾರಣ.
ಅಂದು ಶೆಟ್ಟರ್ ನೇತೃತ್ವದ ಸರಕಾರವೂ ತನ್ನ ಅವಧಿಯ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಕುಮ್ಕಿ ಕುರಿತು ತೀರ್ಮಾನ ಕೈಗೊಂಡಿತ್ತು. ಈ ಬಾರಿಯೂ ಸರಕಾರದ ಅವಧಿಯ ಕೊನೆ ಅವಧಿಯಲ್ಲೇ ಕುಮ್ಕಿ ಹಕ್ಕು ಜಾರಿಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಅದರಂತೆ ಕುಮ್ಕಿ ಜಮೀನುಗಳನ್ನು 5 ಎಕರೆಗೆ ಮೀರದಂತೆ 30 ವರ್ಷ ಅವಧಿಗೆ ಗುತ್ತಿಗೆ ನೀಡುವುದಕ್ಕೆ ಬೇಕಾದ ಕಾನೂನು ತಿದ್ದುಪಡಿ ತರುವುದಕ್ಕೆ ನಿಕಟ ಪೂರ್ವ ಕಂದಾಯ ಸಚಿವ ಆರ್.ಅಶೋಕ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಿಂದ ವರದಿ ಕೇಳಿದ್ದು, ಸಮಿತಿ ಈಗಾಗಲೇ ಶಿಫಾರಸು ಮಾಡಿದೆ. ಕುಮ್ಕಿ ಜಮೀನನ್ನು ಕೃಷಿಕರ ಹಿಡುವಳಿ ಜಮೀನು ಹೊರತು ಪಡಿಸಿ 5 ಎಕರೆಗೆ ಮೀರದಂತೆ ಗುತ್ತಿಗೆ ಮೌಲ್ಯವನ್ನು ನಿಗದಿ ಪಡಿಸಿ 30 ವರ್ಷ ಅವಧಿಗೆ ಗುತ್ತಿಗೆ ನೀಡಲು ಕರ್ನಾಟಕ ಭೂಕಂದಾಯ ಕಾಯಿದೆ 1964ಕ್ಕೆ ತಿದ್ದುಪಡಿ ತರಬಹುದು ಎಂದು ಸಮಿತಿ ತಿಳಿಸಿತ್ತು. ಆದರೆ ಸರಕಾರ ಬದಲಾಗಿರುವುದರಿಂದ ಈ ಶಿಫಾರಸು ಈಗ ಅನುಷ್ಠಾನಕ್ಕೆ ಬರುವುದೇ ಎನ್ನುವ ಸಂದೇಹ ಕೃಷಿಕರನ್ನು ಕಾಡತೊಡಗಿದೆ.
ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ 31,373 ರೈತರು 73,408 ಎಕರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿದ್ದು, ಆ ಜಮೀನಿಗೂ 30 ವರ್ಷ ಅವಧಿಗೆ 25 ಎಕರೆ ವರೆಗೆ ಗುತ್ತಿಗೆ ನೀಡಲು ಸರಕಾರ ಕೆಲವು ತಿಂಗಳ ಹಿಂದೆಯಷ್ಟೇ ಆದೇಶ ಮಾಡಿತ್ತು. ಅದೇ ಮಾದರಿಯನ್ನು ಕುಮ್ಕಿಗೂ ಅನ್ವಯಿಸಬೇಕು ಎನ್ನುವುದು ಕರಾವಳಿ ಭಾಗದ ಶಾಸಕರ ಒತ್ತಾಯವಾಗಿತ್ತು.
ಕುಮ್ಕಿ ಭೂಮಿಯೆಂದರೆ…
ಕೃಷಿಕರ ಸಾಗುವಳಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸೊಪ್ಪು ಹಾಗೂ ಹುಲ್ಲು, ಕಟ್ಟಿಗೆ ಇತ್ಯಾದಿ ಬಳಸಿಕೊಳ್ಳುವುದಕ್ಕಾಗಿ ವರ್ಗ ಜಮೀನಿಗೆ ತಾಗಿ ಕೊಂಡಿರುವ ಸರಕಾರಿ ಜಮೀನನ್ನು ಒದಗಿಸಿದ್ದು ಅದಕ್ಕೆ ಕುಮ್ಕಿ ಭೂಮಿ ಎನ್ನುತ್ತಾರೆ. ಮೂಲತಃ ಇದು ಉರ್ದು ಪದವಾದ “ಕುಮ್ಮಕ್ಕು’ನಿಂದ ಬಂದಿದೆ, ಕುಮ್ಮಕ್ಕು ಎಂದರೆ ಪ್ರೋತ್ಸಾಹ. ಬ್ರಿಟಿಷರು ಹಿಂದೆ ಆದೇಶ ಹೊರಡಿಸಿ, ಕೃಷಿಭೂಮಿಯಿಂದ 100 ಗಜ, ಅಥವಾ 250 ಲಿಂಕ್ಸ್ ಸರಕಾರಿ ಜಾಗವನ್ನು ಕೃಷಿಕರು ಬಳಸಿಕೊಳ್ಳಬಹುದು ಎಂದಿದ್ದರು. ಅದುವೇ ಕುಮ್ಕಿ ಜಾಗ. ಇದೇ ಜಾಗಕ್ಕೆ ಸೊಪ್ಪಿನಬೆಟ್ಟ, ಕಾನ, ಬಾಣೆ ಎಂದು ಮಲೆನಾಡು, ಕೊಡಗು ಭಾಗದಲ್ಲಿ ಕರೆಯುತ್ತಾರೆ.