ಸರಕಾರ ಬದಲಾದಂತೆ ಪಠ್ಯಪುಸ್ತಕ ಬದಲಾಗುವುದೇ? ಶೈಕ್ಷಣಿಕ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಿಗಬಹುದೇ?

ಶೇರ್ ಮಾಡಿ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ಭವಿಷ್ಯ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈಗಾಗಲೇ ಶೇ.90ರಷ್ಟು ಪಠ್ಯ ಪುಸ್ತಕಗಳು ವಿತರಣೆಯಾಗಿದ್ದು, ಇದೇ 29ರಿಂದ ಆರಂಭವಾಗಲಿರುವ 2023-24ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಪರಿಷ್ಕೃತ ಪಠ್ಯವನ್ನೇ ಓದುತ್ತಾರೋ ಅಥವಾ ಪಠ್ಯ ಪುಸ್ತಕ ಇನ್ನೊಮ್ಮೆ ಪರಿಷ್ಕೃತ ಗೊಳ್ಳಲಿದೆಯೇ ಎಂಬ ಚರ್ಚೆ ಆರಂಭಗೊಂಡಿದೆ.
ಬಿಜೆಪಿ ಸರಕಾರ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿ 5ರಿಂದ 10ನೇ ತರಗತಿ ವರೆಗಿನ ಕೆಲವು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿತ್ತು. ಇದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಠ್ಯಪುಸ್ತಕವನ್ನು ಸಾರ್ವಜನಿಕವಾಗಿ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿ ಭಟನೆಯಲ್ಲಿ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌ ಮುಂತಾದವರು ಪಾಲ್ಗೊಂಡಿದ್ದರು.

ಶೈಕ್ಷಣಿಕ ವರ್ಷ ಆರಂಭದ ದಿನದಂದೇ ಮಕ್ಕಳ ಕೈಯಲ್ಲಿ ಪಠ್ಯಪುಸ್ತಕ ಇರಬೇಕು. ಇದರಿಂದ ವೇಳಾ ಪಟ್ಟಿಯಂತೆ ಸುಸೂತ್ರವಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಈಗಾಗಲೇ ಪರಿಷ್ಕೃತ ಪಠ್ಯವನ್ನು ವಿತರಿಸಲಾಗಿದೆ. ಆದರೆ ಹೊಸ ಸರಕಾರ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ ಈ ವರ್ಷದಲ್ಲೇ ವಿತರಿಸಲು ಮುಂದಾದರೆ ಶೈಕ್ಷಣಿಕ ಚಟುವಟಿಕೆ ಗಳು ಅಸ್ತವ್ಯಸ್ತವಾದೀತು. ಅಲ್ಲದೆ ಪಠ್ಯ ಪುಸಕ್ತ ಪರಿಷ್ಕರಣೆಗೆಂದು ಹೊಸ ಸಮಿತಿ ರಚಿಸಿ, ಅದರ ವರದಿ ಆಧರಿಸಿ ಪರಿಷ್ಕರಿಸಬೇಕಾಗುತ್ತದೆ.
ಪರಿಷ್ಕೃತ ಪಠ್ಯದಲ್ಲಿನ ವಿವಾದಿತ ಅಂಶಗಳನ್ನು ಕೈ ಬಿಟ್ಟು ಪಠ್ಯ ಚಟುವಟಿಕೆಯನ್ನು ಸರಕಾರ ನಡೆಸಬಹುದು ಎಂಬ ಅಭಿಪ್ರಾಯಯೂ ಇದೆ. ಆದರೆ ರೋಹಿತ್‌ ಚಕ್ರತೀರ್ಥ ಸಮಿತಿಯು ಪಠ್ಯಗಳನ್ನು ಕೈ ಬಿಟ್ಟಿಲ್ಲ ಅಥವಾ ಹೊಸದನ್ನು ಸೇರಿಸಿಲ್ಲ. ಬದಲಾಗಿ ಕೆಲವು ಪದಪುಂಜ, ವಾಕ್ಯ ಬದಲಾಯಿಸಿದೆ. ಇಂತಹ ಶಬ್ದ, ವಾಕ್ಯ ಗಳನ್ನು ಕೈ ಬಿಟ್ಟು ಪಾಠ ಮಾಡಲು ಸಾಧ್ಯವೇ ಎಂಬುದು ಶಿಕ್ಷಣ ತಜ್ಞರ ಪ್ರಶ್ನೆ.

ಈಗಾಗಲೇ ಪಠ್ಯ ಮುದ್ರಣಕ್ಕೆ ಸುಮಾರು 170 ಕೋಟಿ ರೂ. ಖರ್ಚಾಗಿದೆ. ಈಗ ಮತ್ತೆ ಪುಸ್ತಕ ಮುದ್ರಣ ದೊಡ್ಡ ಸಾಹಸವಾಗಲಿದೆ. ಜತೆಗೆ ಜಾಗತಿಕ ವಿದ್ಯಮಾನಗಳ ಪರಿಣಾಮ ಕಾಗದದ ದರವೂ ಹೆಚ್ಚಾಗಿದ್ದು ಪುಸ್ತಕ ಮುದ್ರಣ ದರ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ. ಹಾಗೆಯೇ ರಾಜ್ಯದಲ್ಲಿ ಕಾಗದದ ಮಿಲ್‌ಗ‌ಳಿಲ್ಲ. ಇದರಿಂದಾಗಿ ಸಕಾಲದಲ್ಲಿ ಪುಸ್ತಕ ಸರಬರಾಜು ಮಾಡುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯಪುಸ್ತಕ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ.

Leave a Reply

error: Content is protected !!