ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಯ ಅಧಿಕೃತ ಆದೇಶ ಹೊರಬಿದ್ದಿದೆ. ಪ್ರಮುಖವಾಗಿ, ಮಹಿಳೆಯರ ಜತೆ ಲಿಂಗತ್ವ ಅಲ್ಪಸಂಖ್ಯಾತರಿಗೂ (ತೃತೀಯ ಲಿಂಗಿಗಳಿಗೂ) ಅವಕಾಶ ಮಾಡಿಕೊಡಲಾಗಿದ್ದು, ಮುಂದಿನ ಮೂರು ತಿಂಗಳೊಳಗೆ ಉಚಿತ ಸೌಲಭ್ಯ ಪಡೆಯುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಪ್ರಸ್ತುತ ರಾಜ್ಯ ಸರ್ಕಾರದ “ಶಕ್ತಿ ಯೋಜನೆ” ಯಡಿ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ವ ಅಲ್ಪಸಂಖ್ಯಾತರು (ತೃತೀಯ ಲಿಂಗಿಗಳು) ನಗರ, ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ (ಎ.ಸಿ ಬಸ್ ಮತ್ತು ಐಷಾರಾಮಿ ಬಸ್ಗಳನ್ನು ಹೊರತುಪಡಿಸಿ) ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಸಿಟಿ), ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಸುಗಳಲ್ಲಿ ಜೂನ್ 11 ರಿಂದ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೂರು ತಿಂಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಬೇಕು
ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಸಾರ್ವಜನಿಕರು ಸಂಬಂಧಪಟ್ಟ ಸಾರಿಗೆ ಇಲಾಖೆಗೆ ಸಲ್ಲಿಸಬೇಕು. ಅಂತೆಯೇ ನಿಗಮಗಳು ಶಕ್ತಿ ಸ್ಮಾರ್ಟ್ ಕಾರ್ಡ್ಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರವು ಆದೇಶದಲ್ಲಿ ಸಾರಿಗೆ ನಿಗಮಗಳಿಗೆ ಸೂಚಿಸಿದೆ.
ಸ್ಮಾರ್ಟ್ ಕಾರ್ಡ್ ಬರೋವರೆಗೂ ಗುರುತಿನ ಚೀಟಿ ಕಡ್ಡಾಯ
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವ ತನಕ ಭಾರತ ಸರ್ಕಾರ/ಕರ್ನಾಟಕ ಸರ್ಕಾರದ ಇಲಾಖೆ/ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ನೋಡಿಕೊಂಡು ಬಸ್ ಕಂಡಕ್ಟರ್ಗಳು ಮಹಿಳೆಯರಿಗೆ ಶೂನ್ಯ ಟಿಕೆಟ್ ವಿತರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಸಾರಿಗೆ ಸಂಸ್ಥೆಗಳಿಗೆ ಹಣ ಭರಿಸುವುದೇಗೆ?
ಈ ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್/ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಚಿತ ಬಸ್ ಪ್ರಯಾಣಕ್ಕೆ ಷರತ್ತುಗಳೇನು?
ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಎಲ್ಲಾ ಈ ಯೋಜನೆಯು ಅನ್ವಯಿಸುತ್ತದೆ. ಅಂತರ ರಾಜ್ಯ ಸಾರಿಗೆ ಬಸ್ಗಳಿಗೆ ಅನ್ವಯಿಸುವುದಿಲ್ಲ.
ಐಷಾರಾಮಿ ಬಸ್ಗಳಾದ ರಾಜಹಂಸ, ನಾನ್-ಎ.ಸಿ. ಸೀವರ್ ಹಾಗೂ ವಜ್ರ ವಾಯುವಜ್ರ ಐರಾವತ, ಐರಾವತ ಕ್ಲಬ್ ಕ್ರಾಸ್, ಐರಾವತ ಗೋಲ್ ಕಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಇವಿ ಪವರ್ ಪ್ಲಸ್ (ಎ.ಸಿ. ಬಸ್ಗಳು) ಇವುಗಳಿಗೆ ರಾಜ್ಯ ಸರ್ಕಾರ ನೀಡುವ ಉಚಿತ ಪ್ರಯಾಣ ಅನ್ವಯಿಸುವುದಿಲ್ಲ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಎಲ್ಲಾ ಬಸ್ಗಳಲ್ಲಿ (ಅಂತರರಾಜ್ಯ, ಎ.ಸಿ. ಮತ್ತು ಐಷಾರಾಮಿ, ಬಸ್ಗಳನ್ನು ಹೊರತುಪಡಿಸಿ) ಶೇ 50ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡಬೇಕು.