ಬೆಂಗಳೂರು: ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ರಾಜ್ಯ ಸರ್ಕಾರ ಮಹಿಳೆಯರಿಗೆ ರಸ್ತೆ ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಕೆಲವು ಅಹಿತಕರ ಘಟನೆಗಳು ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಚಾಲನಾ ಸಿಬ್ಬಂದಿ ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಮಹಿಳೆಯರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಇಲ್ಲವಾದಲ್ಲಿ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಮಹಿಳೆಯರಿರುವ ಬಸ್ ನಿಲ್ದಾಣ ಸ್ಥಳಗಳಲ್ಲಿ ಬಸ್ ನಿಲ್ಲಿಸದೇ ಇರುವುದು, ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದು ಹಾಗೂ ಇನ್ನಿತರ ರೀತಿಯಲ್ಲಿ ಅಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿವೆ. ಇದನ್ನು ಸಾರಿಗೆ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.ಮಹಿಳೆಯರಿಗೆ ವಿತರಿಸುವ ಟಿಕೆಟ್ ಮೊತ್ತವನ್ನು ಸಾರಿಗೆ ಆದಾಯವೆಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಚಾಲಕ ಮತ್ತು ನಿರ್ವಾಹಕರುಗಳು ನಿಗದಿತ ಎಲ್ಲ ಬಸ್ ನಿಲ್ದಾಣ/ ಬಸ್ ನಿಲ್ಲುವ ಸ್ಥಳಗಳಲ್ಲಿ ನಿಲುಗಡೆ ಮಾಡಲೇಬೇಕು ಎಂದು ನಿರ್ದೇಶನ ನೀಡಲಾಗಿದೆ. ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಇನ್ನು ಮುಂದೆ ಮಹಿಳಾ ಪ್ರಯಾಣಿಕರೊಂದಿಗೆ ಯಾವುದೇ ರೀತಿಯಲ್ಲಿ ಅಗೌರವದಿಂದ ನಡೆದುಕೊಳ್ಳುವ ಪ್ರಕರಣಗಳು ವರದಿಯಾದಲ್ಲಿ ಸಂಬಂಧಿತ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಚಾಲನಾ ಸಿಬ್ಬಂದಿ ಶಕ್ತಿ ಯೋಜನೆಯ ಪರಿಣಾಮಕಾರಿ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವಂತೆ ಮನವಿ ಮಾಡಿದೆ. ಶಕ್ತಿ ಯೋಜನೆಯಡಿ ಪ್ರತಿದಿನ ಲಕ್ಷಾಂತರ ಮಹಿಳೆಯರು ರಾಜ್ಯದ ವಿವಿಧೆಡೆ ಸಂಚಾರ ಮಾಡುತ್ತಿದ್ದಾರೆ.