ಬೈಕಿಗೆ ಬಸ್ ಢಿಕ್ಕಿ: ಬ್ಯಾಂಕ್ ಉದ್ಯೋಗಿ ಯುವಕ ಮೃತ್ಯು

ಶೇರ್ ಮಾಡಿ

ಗುರುಪುರ: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿ ಮೃತಪಟ್ಟಿರುವ ಘಟನೆ ವಾಮಂಜೂರು ಸಹಕಾರಿ ವ್ಯವಸಾಯ ಬ್ಯಾಂಕ್ ಎದುರು ಗುರುವಾರ ಬೆಳಗ್ಗೆ ವರದಿಯಾಗಿದೆ.

ಮೃತರನ್ನು ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್(34) ಎಂದು ತಿಳಿದು ಬಂದಿದೆ.

ಸಂತೋಷ್ ಅವರು ವಾಮಂಜೂರಿನಲ್ಲಿರಿವ ಸಹಕಾರಿ ವ್ಯವಸಾಯ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು, ಎಂದಿನಂತೆ ಗುರುವಾರ ಬೆಳಗ್ಗೆ ತನ್ನ ಬೈಕ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಗುರುಪುರ ವ್ಯವಸಾಯ ಬ್ಯಾಂಕ್ ಮುಂಭಾಗದಲ್ಲಿ ಹಂಪ್ಸ್ ಗಳಿದ್ದ ಪರಿಣಾಮ ಬೈಕ್ ನಿಧಾನ ಮಾಡಿದ್ದು, ಹಿಂದಿನಿಂದ ಬರುತ್ತಿದ್ದ ಮೂಡುಬಿದಿರೆ- ಮಂಗಳೂರು ಸಂಚರಿಸುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸಂತೋಷ್ ಅವರನ್ನು ತಕ್ಷಣ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಸಂತೋಷ್ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಬಜ್ಪೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಸಂತೋಷ್ ಪತ್ನಿ, ಎರಡು ವರ್ಷದ ಮಗು, ತಾಯಿ, 2 ಸಹೋದರರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.

Leave a Reply

error: Content is protected !!