ಕಡಬ: ಸೈಂಟ್ ಜೋಕಿಮ್ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸರಕಾರಿ ಪದವಿ ಪೂರ್ವ ಕಾಲೇಜು, ಕಡಬದ ರಾಜ್ಯಶಾಸ್ತ್ರ ಉಪನ್ಯಾಸಕ ಸೆಲಿನ್ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಲು ವಿದ್ಯಾರ್ಥಿ ಸಂಘ ವೇದಿಕೆಯಾಗಿದೆ, ನಮ್ಮ ದೇಶದ ಚುನಾವಣಾ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮಾದರಿ ಇಡೀ ವಿಶ್ವದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ, ಪ್ರಜಾಪ್ರಭುತ್ವದ ಮಾದರಿಗೆ ಪೂರಕವಾಗಿ ನೇರ ಚುನಾವಣೆಯಲ್ಲಿ ಆಯ್ಕೆಗೊಂಡವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ವಂ.ಪಾವ್ಲ್ ಪ್ರಕಾಶ್ ಡಿಸೋಜ ಅವರು ಅಧ್ಯಕ್ಷೀಯ ಭಾಷಣದಲ್ಲಿ -ವಿದ್ಯಾ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಸಂಘ ಸಮರ್ಪಕವಾಗಿ ಜವಾಬ್ದಾರಿಯಿಂದ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಂ.ಅಮಿತ್ ಪ್ರಕಾಶ್ ರೋಡ್ರಿಗಸ್,ಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಫೆರ್ನಾಂಡಿಸ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರುಗಳಾದ ಸತೀಶ್ ನಾಯಕ್, ಬಾಲಕೃಷ್ಣ, ಆದಮ್ ಯುನೂಸ್, ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದ ವಿದ್ಯಾ ಸಂಸ್ಥೆಯ ಮುಖ್ಯಸ್ಥರುಗಳಾದ ಕಿರಣ್ ಕುಮಾರ್, ಶ್ರೀಮತಿ ಶ್ರೀಲತಾ, ಸಿಸ್ಟರ್ ಹಿಲ್ಡಾ ರೋಡ್ರಿಗಸ್, ವಿದ್ಯಾರ್ಥಿ ಸಂಘದ ಸಂಯೋಜಕರಾದ ಮ್ಯಾಥ್ಯೂ ಇ.ಜೆ, ಶ್ರೀಮತಿ ಏಲಿಕುಟ್ಟಿ, ಶ್ರೀಮತಿ ಜಲಜಾಕ್ಷಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಪ್ರಾಥಮಿಕ ಶಾಲಾ ವಿಭಾಗದ ನಾಯಕ ವಿವಾನ್, ಪ್ರೌಢಶಾಲಾ ವಿಭಾಗದ ನಾಯಕಿ ಇಂಚರ ಹಾಗೂ ಕಾಲೇಜು ವಿಭಾಗದ ನಾಯಕಿ ಹರ್ಷಿಣಿ ಇವರನ್ನು ಬ್ಯಾಡ್ಜ್ ತೊಡಿಸಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಕಾಲೇಜು ವಿದ್ಯಾರ್ಥಿ ಸಂಘದ ಸಂಯೋಜಕರಾದ ಶ್ರೀ ಮ್ಯಾಥ್ಯೂ ಇ. ಜೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಸಂಯೋಜಕಿ ಏಲಿಕುಟ್ಟಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಲತಾ ಕಾರ್ಯಕ್ರಮ ನಿರೂಪಿಸಿದರು.