ಮಂಗಳೂರು: ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗರೇಟ್ ಮತ್ತು ಗುಟ್ಕಾ ಬಳಕೆಯ ವಿರುದ್ಧ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ಪೊಲೀಸರು ನಡೆಸಿದ ವಿಶೇಷ ಮತ್ತು ಸಾಮೂಹಿಕ ಅಭಿಯಾನದಲ್ಲಿ 153 ಸಿಗರೇಟ್, ಗುಟ್ಕಾ ಎರಡನ್ನೂ ಹೊಂದಿರುವ ಅಂಗಡಿಗಳು ಪತ್ತೆಯಾಗಿವೆ.
ಮಂಗಳೂರು ನಗರ ಕಮಿಷನರೇಟ್‌ನ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಒಟ್ಟು 348 ಅಂಗಡಿಗಳು, ಸಂಸ್ಥೆಗಳಿಗೆ ಪೊಲೀಸರು ದಾಳಿ ನಡೆಸಿದ್ದರು. ಪರಿಶೀಲನೆ ನಡೆಸಿದ್ದರು. ಸಿಗರೇಟ್ ಅಥವಾ ಗುಟ್ಕಾ ಪತ್ತೆಯಾದ ಅಂಗಡಿ ಮಾಲಕರ ವಿರುದ್ಧ ಕೊಟ್ಪಾ( ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲರಿಗೂ ತಲಾ 200 ರೂ ದಂಡವನ್ನು ವಿಧಿಸಲಾಗಿದೆ ಮತ್ತು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.