ನೂಜಿಬಾಳ್ತಿಲ: ಬೆಥನಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ದಿನ ಮತ್ತು ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ವಿದ್ಯಾಸಂಸ್ಥೆಯ ಸ್ಥಳೀಯ ಸಂಚಾಲಕರಾದ ಫಾ.ವಿಜೊಯ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಡಬ ಆರಕ್ಷಕ ಠಾಣಾ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಹದಿಹರೆಯದ ಪ್ರಾಯದಲ್ಲಿ ಹೇಗೆ ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡಿದರು. ತಂಬಾಕು ಸೇವನೆ, ಧೂಮಪಾನ, ಮದ್ಯಪಾನ, ಮುಂತಾದ ದುಶ್ಚಟಗಳಿಂದ ನಮ್ಮ ಆರೋಗ್ಯ ನಷ್ಟವಾಗುವುದರಿಂದ ದೇಶದ ಆರೋಗ್ಯವಂತ ಜನ ಸಂಪನ್ಮೂಲಕ್ಕೆ ನಷ್ಟ ಎಂದು ಹೇಳಿದರು.
ರಸಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರಿಸಿದವರಿಗೆ ಪುಸ್ತಕವನ್ನು ಬಹುಮಾನವಾಗಿ ವಿತರಿಸಿದರು. ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಗುರುಗಳಾದ ಥಾಮಸ್ ಏ.ಕೆ ಧನ್ಯವಾದಗಳು ಸಮರ್ಪಿಸಿದರು. ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.