ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಗಣಿತ ವಿಭಾಗದ ವತಿಯಿಂದ ಸ್ವರ್ಣಾನುಪಾತ ಎಂಬ ವಿಷಯದ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ರಿಜಿಸ್ಟ್ರಾರ್ ಪ್ರೊ. ಎಸ್ ಎನ್ ಕಾಕತ್ಕರ್ ಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
“ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಪರಿಸರದಲ್ಲಿ ಹಲವು ವಿಜ್ಞಾನದ ವಿಸ್ಮಯಗಳು ಕಾಣಸಿಗುತ್ತವೆ. ಅವುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡುವುದು ಅನಿವಾರ್ಯವಾಗಿದೆ ಹಾಗೂ ವೈಜ್ಞಾನಿಕ ಮನೋಭಾವನೆಯಿಂದ ಹಲವು ಆವಿಷ್ಕಾರಗಳು ನೆರವೇರುತ್ತವೆ” ಎಂದರು.
ಸಾಕ್ಷ್ಯಚಿತ್ರ ನಿರ್ಮಾಪಕರಾದ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಬಿ ಗಣೇಶ್ ನಾಯಕ್, ವಿನ್ಯಾಸಕಾರ ರಕ್ಷಿತ್ ರೈ, ಸಂಕಲನಕಾರ ಚಂದ್ರಶೇಖರ್ ರವರನ್ನು ಅಭಿನಂದಿಸಲಾಯಿತು. ನಿರ್ದೇಶಕ ರಕ್ಷಿತ್ ರವರನ್ನು ಗಣ್ಯರು ಗೌರವಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮೌಲ್ಯಮಾಪನ ಕುಲಸಚಿವರಾದ ನಂದಕುಮಾರಿ ಪಿ, ಗಣಿತ ವಿಭಾಗದ ಪ್ರಾಧ್ಯಾಪಕರಾದ ಪೂಜಿತಾ ವರ್ಮಾ ಜೈನ್, ಅಕ್ಷತಾ ಬಿ ಹಾಗೂ ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಸಾದ್ ಕೃಷ್ಣದಾಸ್ ನಿರೂಪಿಸಿದರು.