ಮಂಗಳೂರು: ಅನ್ನ ಭಾಗ್ಯ ಅಕ್ಕಿ ಹಣ ವರ್ಗಾವಣೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಇದು ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ.
ಉಳಿದ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಂತ ಹಂತವಾಗಿ ಮುಂದಿನ ಹತ್ತು ದಿನಗಳಲ್ಲಿ ಹಾಕಲಾಗುವುದು ಎಂದು ಸ್ವತಃ ಸಿಎಂ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪೂರಕ ವೆಂಬಂತೆ ದಕ್ಷಿಣ ಕನ್ನಡದ ಫಲಾನುಭವಿಗಳ ಪ್ಯಾಕೇಜ್ ಈಗಾಗಲೇ ಸಿದ್ಧಪಡಿಸಲಾಗಿದೆ, ಉಡುಪಿ ಜಿಲ್ಲೆಯ ಪ್ಯಾಕೇಜ್ ಸಿದ್ಧಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಆಯಾ ಜಿಲ್ಲೆಯ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರ ಕುಟುಂಬದ ಯಜಮಾನರ ಪಟ್ಟಿಯನ್ನು ಎನ್ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ) ಬೆಂಗ ಳೂರಿನಲ್ಲಿ ಸಿದ್ಧಪಡಿಸುತ್ತದೆ. ಹೀಗೆ ಸಿದ್ಧ ಪಡಿಸಿದ ಒಂದೊಂದು ಪ್ಯಾಕೇಜ್ನಲ್ಲಿ 20 ಸಾವಿರ ಮಂದಿಯ ಹೆಸರು ಇರುತ್ತದೆ. ಈ ಪಟ್ಟಿಯನ್ನು ಲಾಗಿನ್ ಮೂಲಕ ಜಿಲ್ಲಾ ಮಟ್ಟದ ಆಹಾರ ಇಲಾಖೆಗೆ ಕಳುಹಿಸಲಾಗುತ್ತದೆ. ಅಲ್ಲಿಯ ಅಧಿಕಾರಿ ಅದನ್ನು ಖಜಾನೆಯ ಕೆ2 ವಿಭಾಗಕ್ಕೆ ಕಳುಹಿಸಿದ ಬಳಿಕ ಅಲ್ಲಿಂದ ನೇರವಾಗಿ ಮೊತ್ತ ಫಲಾನುಭವಿಯ ಖಾತೆಗೆ ಹೋಗುತ್ತದೆ. ಇದು ಈ ಯೋಜನೆಯ ವ್ಯವಸ್ಥೆ.
ದ.ಕ. ಜಿಲ್ಲೆಯಲ್ಲಿ ಬಿಪಿಎಲ್ನ 10,25,796 ಕಾರ್ಡ್ದಾರರಿದ್ದಾರೆ, ಅದೇ ರೀತಿ ಅಂತ್ಯೋದಯ ಯೋಜನೆ ಯಲ್ಲಿ 1,15,858 ಕಾರ್ಡ್ ದಾರರಿದ್ದಾರೆ. ಇವರ ಖಾತೆ ಗಳಿಗೆ ಹಣ ಬರಲಿದೆ. ಉಡುಪಿ ಜಿಲ್ಲೆಯಲ್ಲಿ 6,83,026 ಬಿಪಿಎಲ್ ಹಾಗೂ 1,51,132 ಅಂತ್ಯೋದಯ ಕಾರ್ಡ್ ದಾರರಿದ್ದಾರೆ.
ದ.ಕ.ದ ಪ್ಯಾಕೇಜ್ ಸಿದ್ಧಗೊಳಿಸಲಾಗಿದ್ದು, ನೇರಪಾವತಿಗೆ ಜಿಲ್ಲೆಯಲ್ಲಿ 37,801 ಗ್ರಾಹಕರ ಹೆಸರು ತಿರಸ್ಕೃತವಾಗಿದೆ. ಉಡುಪಿ ಜಿಲ್ಲೆಯದು ಸಿದ್ಧವಾಗುತ್ತಿದ್ದು, 19,602 ಹೆಸರು ತಿರಸ್ಕೃತಗೊಂಡಿದೆ.
ಇದಕ್ಕೆ ಮೂರು ಕಾರಣ ತಿಳಿಸಲಾಗಿದೆ. ಗ್ರಾಹಕರಿಗೆ ಬ್ಯಾಂಕ್ ಖಾತೆ ಇಲ್ಲದಿರುವುದು ಅಥವಾ ಖಾತೆ ನಿಷ್ಕ್ರಿಯವಾಗಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿರುವುದು ಅಥವಾ ಆಧಾರ್ ನೆರವಿನ ಪಾವತಿ ವ್ಯವಸ್ಥೆ ಇಲ್ಲದಿರುವುದು, ಫಲಾನುಭವಿಗಳ ಆಧಾರ್ ತಪ್ಪಾಗಿ ನಮೂದಾಗಿರುವುದು.
ಸರಿಪಡಿಸಲು ಕ್ರಮ
ಅಧಿಕಾರಿಗಳು ಈ ತಿರಸ್ಕೃತರ ಪಟ್ಟಿಯನ್ನು ಆಯಾ ಪಡಿತರ ಅಂಗಡಿಗೆ ತಲಪಿಸಲಿದ್ದು, ಅಲ್ಲಿ ಅವರ ತಿರಸ್ಕೃತಗೊಂಡ ಕಾರಣ ತಿಳಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಿದ್ದಾರೆ. ಬ್ಯಾಂಕ್ಗೆ ಹೋಗಿ ಖಾತೆ ತೆರೆಯುವುದು, ನಿಷ್ಕ್ರಿಯಗೊಂಡ ಖಾತೆ ಚಾಲ್ತಿಗೊಳಿಸುವುದು, ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು, ಸರಿಯಾದ ಆಧಾರ್ ಪಡೆದು ಸರಿಪಡಿಸುವ ಕೆಲಸ ನಡೆಯಲಿದೆ.