ನಕಲಿ ಸೀಲ್‌ ಬಳಸಿ ದಾಖಲೆ ಸಿದ್ದಪಡಿಸುತ್ತಿದ್ದ ಬಿಬಿ ಎಲೆಕ್ಟ್ರಿಕ್‌ ಮತ್ತು ಪ್ಲಂಬಿಂಗ್‌ ಅಂಗಡಿಗೆ ದಾಳಿ: ಆರೋಪಿ ವಿಶ್ವನಾಥ ಬಿ.ವಿ ವಶಕ್ಕೆ

ಶೇರ್ ಮಾಡಿ

ಪುತ್ತೂರು: ಗ್ರಾ. ಪಂ., ನಗರಸಭೆಯ ನಕಲಿ ಸೀಲ್‌ ಬಳಸಿ ನಕಲಿ ದಾಖಲೆ ಪತ್ರ ತಯಾರಿಸುತ್ತಿದ್ದ ಅಂಗಡಿಗೆ ದಾಳಿ ನಡೆಸಿದ ವೇಳೆ ನೂರಾರು ನಕಲಿ ದಾಖಲೆಗಳು ಪತ್ತೆಯಾದ ಘಟನೆ ಮಂಗಳವಾರ ಪುತ್ತೂರು ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲು ಬಳಿಯ ಎಂ.ಎಸ್‌. ಕಾಂಪ್ಲೆಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಬಿ ಎಲೆಕ್ಟ್ರಿಕ್‌ ಮತ್ತು ಪ್ಲಂಬಿಂಗ್‌ನಲ್ಲಿ ನಕಲಿ ದಾಖಲೆಗಳನ್ನು ಸಿದ್ದಪಡಿಸುತ್ತಿದ್ದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ತಾ.ಪಂ. ಇಒ ನವೀನ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ದಂಧೆ ನಡೆಸುತ್ತಿದ್ದ ವಿದ್ಯುತ್‌ ಗುತ್ತಿಗೆದಾರ, ಆರೋಪಿ ಕಬಕ ಗ್ರಾಮದ ಪೆರುವತ್ತೋಡಿ ನಿವಾಸಿ ವಿಶ್ವನಾಥ ಬಿ.ವಿ. ನನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಠಡಿಯಲ್ಲಿ ನಗರಸಭೆ ನಿರಾಕ್ಷೇಪಣ ಪತ್ರ, ತೆರಿಗೆ ಪಾವತಿ ರಶೀದಿ, ಪುತ್ತೂರು ತಾಲೂಕಿನ ಎಲ್ಲ ಗ್ರಾ.ಪಂ. ಹಾಗೂ ಕಡಬ, ಸುಳ್ಯ, ಬಂಟ್ವಾಳ ತಾಲೂಕಿನ ಕೆಲ ಗ್ರಾ.ಪಂ.ನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಿದ್ದಪಡಿಸಿರುವ ಸಾಕ್ಷ್ವ ಲಭ್ಯವಾಗಿದೆ. ಸ್ಥಳದಲ್ಲಿ 50ಕ್ಕೂ ಹೆಚ್ಚು ಸೀಲ್‌ಗ‌ಳು ಪತ್ತೆಯಾಗಿವೆ. ಸ್ಥಳದಿಂದ ನಕಲಿ ಎನ್‌ಒಸಿ, ತೆರಿಗೆ ಪಾವತಿ ರಶೀದಿಯನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ನಕಲಿ ದಾಖಲೆ !
ಆರೋಪಿಯು ಅನುಮತಿ ಪಡೆದ ಗುತ್ತಿಗೆದಾರನಾಗಿದ್ದಾನೆ. ದಾಖಲೆಗಳು ಇಲ್ಲದ ಅಕ್ರಮ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎನ್‌ಒಸಿ, ತೆರಿಗೆ ರಶೀದಿಯನ್ನು ನಕಲಿಯಾಗಿ ತಯಾರಿಸುತ್ತಿದ್ದ. ಒಂದೊಂದು ದಾಖಲೆಗೆ 30 ರಿಂದ 40 ಸಾವಿರ ರೂ.ದರ ವಿಧಿಸುತ್ತಿದ್ದ. ಅನುಮಾನ ಬಾರದ ಹಾಗೆ ಇಲಾಖೆಯೊಂದಿಗೆ ತಾನೇ ವ್ಯವಹರಿಸುತ್ತಿದ್ದ. ನಕಲಿ ದಾಖಲೆಗಳನ್ನು ಬಳಸಿಕೊಂಡು ಅಕ್ರಮ ಕಟ್ಟಡಗಳಿಗೆ ವಿದ್ಯುತ್‌ ಸೌಲಭ್ಯ ಕಲ್ಪಿಸಿ ಲಕ್ಷಾಂತರ ರೂ. ಹಣ ಪಡೆಯುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.

ನಕಲಿ ಪತ್ತೆ ಕಾರ್ಯ
ಗ್ರಾ.ಪಂ., ನಗರಸಭೆಯ ನಕಲಿ ಸೀಲ್‌ ಈಗಾಗಲೇ ಸಾವಿರಾರು ಜನರ ಹೆಸರಿನಲ್ಲಿ ನಕಲಿ ಎನ್‌ಒಸಿ, ತೆರಿಗೆ ರಶೀದಿ ನೀಡಿದ್ದಾನೆ. ಇದನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ. ಈ ವೇಳೆ ನಕಲಿ ದಾಖಲೆ ಪಡೆದು ವಿದ್ಯುತ್‌ ಸಂಪರ್ಕ ಪಡೆದವರ ಬಗ್ಗೆಯೂ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

Leave a Reply

error: Content is protected !!