ಅಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ನಡೆಯಿತು.
ಮಹಾಸಭೆ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಾಥ್ ಗೌಡ ಅವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಅವರು ರಕ್ಷಕ ಶಿಕ್ಷಕ ಸಂಘದ ಮಹತ್ವದ ಬಗ್ಗೆ ತಿಳಿಸಿ ವಿದ್ಯಾಸಂಸ್ಥೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ರಕ್ಷಕ ಶಿಕ್ಷಕ ಸಂಘ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಪತಿ ರಾವ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಕಿರು ಪರಿಚಯ ಮಾಡಿದರು. ಪ್ರಾಂಶುಪಾಲರಾದ ನವೀನ್ ರೈ ಅವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀನಾಥ್ ಗೌಡ ಅವರು ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ದಯಾನಂದ ಗೌಡ ಬಡ್ಡಮೆ, ಕಾರ್ಯದರ್ಶಿಗಳಾಗಿ ಶ್ರೀಪತಿ ರಾವ್, ಜೊತೆ ಕಾರ್ಯದರ್ಶಿಗಳಾಗಿ ಶಿವಪ್ಪ ಗೌಡ ಕಜೆ, ಕೋಶಾಧಿಕಾರಿಗಳಾಗಿ ನವೀನ್ ರೈ, ಸದಸ್ಯರಾಗಿ ಧರ್ಮಯ್ಯ ಗೌಡ, ಮಲ್ಲಿಕಾ, ಗೋಪಾಲಕೃಷ್ಣ, ಕಲ್ಪನಾ, ವಿಶಾಲಾಕ್ಷಿ, ಪ್ರೇಮಾವತಿ, ಲಕ್ಷ್ಮಣ ಗೌಡ, ವಸಂತ ಅವರು ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡಲು ಮತ್ತು ತರಗತಿ ಕೊಠಡಿಗಳ ಮೇಲ್ಚಾವಣಿ ದುರಸ್ತಿ ವೇಳೆ ಸಹಕರಿಸಿದ ಪದ್ಮನಾಭ ಗೌಡ ಆಲಡ್ಕ, ಧರ್ಮಯ್ಯ ಗೌಡ, ರಾಮಕೃಷ್ಣ ಗೌಡ ಪಜ್ಜಡ್ಕ, ಶೇಖರ ಗೌಡ ನೆಕ್ಕಿಲಾಡಿ, ಗುರುವ ಅಲಂಕಾರು, ದಯಾನಂದ ಗೌಡ ಬಡ್ಡಮೆ, ಕುಶಾಲಪ್ಪ ಗೌಡ ಬಡ್ಡಮೆ, ಲಕ್ಷ್ಮಣ ಗೌಡ ಕೋಡ್ಲ, ಶ್ರೀನಾಥ್ ಗೌಡ ಕೇವಳ, ಶಿವರಾಮ ಗೌಡ ತೋಟಂತಿಲ ಇವರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ ಅವರು ವಿದ್ಯಾರ್ಥಿಗಳ ಯಶಸ್ಸಿನಲ್ಲಿ ರಕ್ಷಕರು ಮತ್ತು ಶಿಕ್ಷಕರ ಪಾತ್ರದ ಬಗ್ಗೆ ತಿಳಿಸಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯರಾದ ಹೇಮಂತ್ ರೈ ಮನವಳಿಕೆ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳನ್ನು ಹೇಗೆ ಬೆಳೆಸಬೇಕು ಎಂದು ತಿಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರಾಮರಾಜ ನಗ್ರಿ ಅವರು ವಿದ್ಯಾ ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಕಂಪ್ಯೂಟರನ್ನು ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹೆತ್ತವರು ಪೋಷಕರು ಮತ್ತು ಬೋಧಕ ಬೋಧಕೇತರ ವೃಂದದವರು ಹಾಜರಿದ್ದರು.
ಹತ್ತನೇ ತರಗತಿ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಆಂಗ್ಲಭಾಷಾ ಶಿಕ್ಷಕರಾದ ಜನಾರ್ದನ ಅವರು ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿಯಾದ ಶ್ರೀಮತಿ ರೂಪಾ ಅವರು ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಶಿಕ್ಷಕರಾದ ಮಹೇಶ್ ಲಮಾಣಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.