ಟೊಮ್ಯಾಟೋ ಬೆಲೆ ಗಗನಕ್ಕೀರಿದೆ. ಟೊಮ್ಯಾಟೋ ಬೆಳೆ ಬೆಳೆಯುವವರು ಕೋಟ್ಯಧಿಪತಿಗಳಾಗುತ್ತಿದ್ದಾರೆ. ಟೊಮ್ಯಾಟೋ ರಕ್ಷಣೆಗೆ ಬೌನರ್ಸ್ ಗಳನ್ನು ನೇಮಕ ಮಾಡಲಾಗುತ್ತಿದೆ. ಟೊಮ್ಯಾಟೋಗಾಗಿ ಕೊಲೆಯೂ ನಡೆದಿದೆ.
ಸದ್ಯ ದೇಶದಲ್ಲಿ ಟೊಮ್ಯಾಟೋ ಬೆಲೆ ಏರಿಕೆಯೇ ಟ್ರೆಂಡ್ ವಿಚಾರ. ಟೊಮ್ಯಾಟೋ ಬೆಲೆ ಏರಿಕೆ ಅನೇಕರಿಗೆ ಬಿಸಿ ಮುಟ್ಟಿಸಿದೆ. ಟೊಮ್ಯಾಟೋ ಕೊಳ್ಳಲು ಜನ ಹಿಂದೆ – ಮುಂದೆ ನೋಡುತ್ತಿದ್ದಾರೆ. ಆದರೆ ಇದೇ ಟೊಮ್ಯಾಟೋ ಉಚಿತವಾಗಿ ಸಿಕ್ಕರೆ ಹೇಗೆ?
ಹೌದು, ಚಂಡೀಗಢ ಮೂಲದ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಪ್ರಯಾಣಿಸಿದರೆ ಉಚಿತವಾಗಿ ಟೊಮ್ಯಾಟೋವನ್ನು ನೀಡುವುದಾಗಿ ಹೇಳಿರುವುದು ವೈರಲ್ ಆಗಿದೆ.
ಕಳೆದ ಹಲವಾರು ವರ್ಷಗಳಿಂದ ಆಟೋ ಓಡಿಸುತ್ತಿರುವ ಅರುಣ್, 12 ವರ್ಷಗಳಿಂದ ಭಾರತೀಯ ಸೇನೆಯ ಸೈನಿಕರಿಗೆ ಉಚಿತ ಆಟೋ ರಿಕ್ಷಾ ಸವಾರಿಯನ್ನು ನೀಡಿದ್ದಾರೆ. ಅವರ ಆಟೋದಲ್ಲಿ ಈ ಕುರಿತು ಬೋರ್ಡ್ ಹಾಕಿದ್ದಾರೆ. ಇದರೊಂದಿಗೆ ಗರ್ಭಿಣಿಯರಿಗೆ ಆಸ್ಪತ್ರೆಗೆ ಸಾಗಿಸಲು ಉಚಿತವಾಗಿ ತಮ್ಮ ಆಟೋ ಪಯಣವನ್ನು ನೀಡುತ್ತಾರೆ.
ಇದೀಗ ತನ್ನ ಆಟೋದಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಟೊಮ್ಯಾಟೋ ನೀಡುವುದಾಗಿ ಅವರು ಹೇಳಿದ್ದಾರೆ. ತನ್ನ ರಿಕ್ಷಾದಲ್ಲಿ ಐದು ಬಾರಿ ಪ್ರಯಾಣ ಮಾಡಿದರೆ ಅಂತವರಿಗೆ ನಾನು ಉಚಿತವಾಗಿ 1 ಕೆಜಿ ಟೊಮ್ಯಾಟೋ ನೀಡುತ್ತೇನೆ ಎಂದಿದ್ದಾರೆ.
ಇದಲ್ಲದೇ ಒಂದು ವೇಳೆ ಅಕ್ಟೋಬರ್ ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ ಚಂಡೀಗಢದಲ್ಲಿ ವಾರದಲ್ಲಿ 5 ದಿನ ಉಚಿತವಾಗಿ ರಿಕ್ಷಾ ಸವಾರಿಯನ್ನು ಮಾಡುತ್ತೇನೆ ಎಂದಿದ್ದಾರೆ.