ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಆಗ್ರಹ

ಶೇರ್ ಮಾಡಿ

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಕರಾವಳಿ ಭಾಗದ ಶಾಸಕರು ಪಕ್ಷಭೇದ ಮರೆತು ಆಗ್ರಹಿಸಿದರು. ಇದಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಕೂಡ ಧ್ವನಿಗೂಡಿಸಿದರು.
ಮಂಗಳವಾರ ರಾತ್ರಿ ಗಮನ ಸೆಳೆಯುವ ಸೂಚನೆ ವೇಳೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ರೈ, ರಾಜ್ಯದಲ್ಲಿ 1 ಕೋಟಿಗೂ ಅಧಿಕ ಮಂದಿ ತುಳು ಭಾಷೆ ಮಾತನಾಡುವವರು ಇದ್ದೇವೆ. 1994ರಲ್ಲಿ ಡಾ| ಎಂ.ವೀರಪ್ಪ ಮೊಲಿ ಅವರು ಸಿಎಂ ಆಗಿದ್ದಾಗ ತುಳು ಅಕಾಡೆಮಿ ಸ್ಥಾಪಿಸಿದರು. ಕೇರಳದಲ್ಲಿ ಕೂಡ ತುಳು ಭಾಷಾ ಅಕಾಡೆಮಿ ಇದೆ. ಅಮೆರಿಕ ವಿಶ್ವವಿದ್ಯಾಲಯದಲ್ಲಿ ತುಳು ಭಾಷೆಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಬೆಂಬಲ ನೀಡಿದ ವಿಪಕ್ಷ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌, ನಮ್ಮ ಸರಕಾರ ಇದ್ದಾಗ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಿತ್ತು. ಈಗಿನ ಸರಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಇದು ಸಾಧ್ಯವಾಗಲಿದೆ ಎಂದು ಗಮನ ಸೆಳೆದರು. ಅಶೋಕ್‌ ರೈ ಮಾತು ಮುಂದುವರಿಸಿ, ಈಗಾಗಲೇ ಈ ಸಂಬಂಧ ಡಾ| ಅಶೋಕ ಆಳ್ವ ಅವರ ಸಮಿತಿಯೂ ವರದಿ ಕೊಟ್ಟಿದೆ.

ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆ ಮಾಡಲು ಆರ್ಥಿಕ ಹೊಣೆಗಾರಿಕೆಯೂ ಬರುವುದಿಲ್ಲ ಎನ್ನುತ್ತಾ ತುಳುವಿನಲ್ಲೇ ಮಾತು ಪ್ರಾರಂಭ ಮಾಡಿಕೊಂಡರು. ಮಧ್ಯಪ್ರವೇಶಿಸಿದ ವೇದವ್ಯಾಸ ಕಾಮತ್‌ ಸಹ ತುಳು ಭಾಷೆಯಲ್ಲೇ ಮಾತನಾಡಿದರು. ಸ್ಪೀಕರ್‌ ಅವರು ತುಳು ಭಾಷೆ ಮಾತನಾಡಿಕೊಂಡೇ ಇಂದು ಈ ಸ್ಥಾನದವರೆಗೆ ಬಂದಿದ್ದಾರೆ. ಈ ಬಗ್ಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ತುಳುವಿನಲ್ಲೇ ಉತ್ತರಿಸಿದ ಸ್ಪೀಕರ್‌ ಖಾದರ್‌, ಇದು ಗಮನ ಸೆಳೆಯುವ ವೇಳೆ. ಗಮನ ಸೆಳೆದಿದ್ದೀರಿ. ಹೇಳಬೇಕಾದ್ದನ್ನು ಹೇಳಿದ್ದೀರಿ. ಎಲ್ಲವನ್ನೂ ಕೇಳಿಯಾಗಿದೆ. ಸರಕಾರ ಉತ್ತರ ಕೊಡುತ್ತದೆ. ಅದನ್ನೂ ಕೇಳಿ ಎಂದರು.

ಮೂವರೂ ತುಳುವಿನಲ್ಲೇ ಮಾತನಾಡಲು ಶುರು ಮಾಡುತ್ತಿದ್ದಂತೆ ಸದನದಲ್ಲಿ ಅನೇಕರಿಗೆ ಅರ್ಥವಾಗದಂತಾಯಿತು. ಅಷ್ಟೇ ಅಲ್ಲದೆ, ಸದನದ ಕಡತಕ್ಕೆ ಪ್ರತೀ ಮಾತನ್ನೂ ದಾಖಲಿಸುವ ಸಿಬಂದಿಯೂ ಭಾಷೆ ಅರ್ಥವಾಗದೆ ಕಕ್ಕಾಬಿಕ್ಕಿಯಾದರು. ಬಿಜೆಪಿಯ ಸುರೇಶ್‌ ಕುಮಾರ್‌ ಮಧ್ಯಪ್ರವೇಶಿಸಿ, ನೀವೆಲ್ಲರೂ ಮಾತನಾಡುತ್ತಿರುವುದು ಸದನದ ಕಡತಕ್ಕೆ ಹೋಗುವುದು ಬೇಡವೇ ಎನ್ನುತ್ತಿದ್ದಂತೆ, ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಮಾತನಾಡಿ, ತುಳು ಸಂವಿಧಾನಬ್ಧ ಭಾಷೆಯಲ್ಲ. ಹೀಗೆ ನೀವೇ ಮಾತನಾಡಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ತತ್‌ಕ್ಷಣ ಪ್ರತಿಕ್ರಿಯಿಸಿದ ಸ್ಪೀಕರ್‌, ತುಳು ಭಾಷಿಗರು ಎಲ್ಲರನ್ನೂ ಖುಷಿಯಲ್ಲಿ ಇಡುವವರು. ತುಳುವನ್ನು ಅಧಿಕೃತ ಭಾಷೆ ಎಂದು ಘೋಷಿಸಿ, ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದರು.

ಇಲಾಖೆಗಳ ಅಭಿಪ್ರಾಯ ಪಡೆದು ನಿರ್ಣಯ
ಸಚಿವ ಶಿವರಾಜ್‌ ತಂಗಡಗಿ ಉತ್ತರಿಸುತ್ತಾ, ಸರಕಾರವು ನನ್ನನ್ನು ಕನ್ನಡ ಮತ್ತು ಸಂಸ್ಕತಿ ಇಲಾಖೆಗೆ ಸಚಿವನನ್ನಾಗಿ ಮಾಡಿದೆ. ಉತ್ತರಿಸಲು ನನಗಾದರೂ ನಿಮ್ಮ ಮಾತುಗಳು ಅರ್ಥವಾಗಬೇಕಲ್ಲವೇ ಎಂದು ಹಾಸ್ಯ ಮಾಡಿದರು. ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಅಧ್ಯಯನ ನಡೆಸಲು ಡಾ| ಮೋಹನ ಆಳ್ವ ಅಧ್ಯಕ್ಷತೆಯಲ್ಲಿ 2023 ರ ಜ. 12ರಂದು ಸಮಿತಿ ರಚಿಸಲಾಗಿತ್ತು. ಸಮಿತಿಯ ವರದಿ ಬಂದಿದೆ. ಸಂಬಂಧಪಟ್ಟ ಇಲಾಖೆಗಳ ಅಭಿಪ್ರಾಯ ಪಡೆದು ಮುಂದುವರಿಯಬಹುದು ಎಂದು ಶಿಫಾರಸು ಮಾಡಿದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿಯೇ ಇದೆ. ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ಅಭಿಪ್ರಾಯ ಪಡೆಯಿರಿ, ಅಧಿಕೃತ ಭಾಷೆ ಮಾಡಿ
ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಅಭಿಪ್ರಾಯ ಆಧರಿಸಿಯೇ ಆಳ್ವ ಅವರ ಸಮಿತಿಯನ್ನು ರಚಿಸಿತ್ತು ಎಂದ ವೇದವ್ಯಾಸ ಕಾಮತ್‌, ಮತ್ತೆ ಇಲಾಖೆಯ ಅಭಿಪ್ರಾಯ ಕೇಳುವ ಅಗತ್ಯವಿಲ್ಲ. ಇವೆಲ್ಲವನ್ನೂ ನಮ್ಮ ಸರಕಾರ ಇದ್ದಾಗಲೇ ಮಾಡಿದ್ದೆವು. ನೀವೀಗ ಸಂಪುಟದಲ್ಲಿ ನಿರ್ಣಯ ಮಾಡುವುದಷ್ಟೇ ಬಾಕಿ ಇರುವುದು ಎಂದರು. ಪುನಃ ಅಶೋಕ್‌ ರೈ ಮಾತನಾಡಿ, ಪಶ್ಚಿಮ ಬಂಗಾಲದಲ್ಲಿ 12 ಭಾಷೆಗಳನ್ನು ಆ ರಾಜ್ಯದ ಅಧಿಕೃತ ಭಾಷೆಗಳನ್ನಾಗಿ ಪರಿಗಣಿಸಿದೆ. ಕೇರಳದಲ್ಲಿ 10 ಹೆಚ್ಚುವರಿ ಭಾಷೆಗಳು ಅಧಿಕೃತ ಭಾಷೆಗಳಾಗಿವೆ. ನಮ್ಮಲ್ಲಿ ಕನ್ನಡ ಒಂದೇ ಭಾಷೆ ಇರುವುದು. ತುಳುವನ್ನು 2ನೇ ಭಾಷೆಯನ್ನಾಗಿ ಮಾಡಿ ಎಂದು ಒತ್ತಾಯಿಸಿದರು. ಸ್ಪೀಕರ್‌ ಕೂಡ ಧ್ವನಿಗೂಡಿಸಿ, ಇಲಾಖೆಯ ಅಭಿಪ್ರಾಯ ಪಡೆಯಿರಿ, ಅಧಿಕೃತ ಭಾಷೆಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

Leave a Reply

error: Content is protected !!