ಪ್ರತಿಕೂಲ ಹವಾಮಾನದ ಕಾರಣ ತಾನು ಪ್ರಯಾಣಿಸುತ್ತಿದ್ದ ಹಡಗು ಕೆಟ್ಟು ಹೋಗಿ, ಪೆಸಿಫಿಕ್ ಸಾಗರದಲ್ಲಿ ತನ್ನ ಸಾಕು ನಾಯಿಯೊಂದಿಗೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಎರಡು ತಿಂಗಳು ಕಳೆದಿದ್ದಾರೆ.
ಟಿಮ್ ಶಾಡಾಕ್(51) ಮತ್ತು ಸಾಕು ನಾಯಿ ಬೆಲ್ಲಾ 60ಕ್ಕೂ ಹೆಚ್ಚು ದಿನಗಳು ಕೇವಲ ಹಸಿ ಮೀನು ಮತ್ತು ಮಳೆ ನೀರು ಸೇವಿಸಿ, ಸಮುದ್ರದಲ್ಲಿ ಬದುಕಿದ್ದಾರೆ.
ಮೆಕ್ಸಿಕೊದ ಲಾ ಪಾಜ್‌ದಿಂದ ಫ್ರಾನ್ಸ್‌ನ ಫಾಲಿನೇಷ್ಯಾಗೆ 6,000 ಕಿ.ಮೀ. ಸಮುದ್ರ ಪ್ರಯಾಣವನ್ನು ಟಿಮ್ ಕೈಗೊಂಡಿದ್ದರು. ಹಡಗು ಕೆಟ್ಟುಹೋದ ಕಾರಣ ಸಮುದ್ರದಲ್ಲೇ ಕಾಲ ಕಳೆಯುವಂತಾಯಿತು.
ಸೂರ್ಯನ ತಾಪದಿಂದ ರಕ್ಷಣೆ ಪಡೆಯಲು ಹಡಗಿನ ಚಾವಣಿಯನ್ನು ಆಶ್ರಯಿಸಿದರು. ಜು.12ರಂದು ಕಣ್ಗಾವಲು ಹೆಲಿಕಾಪ್ಟರ್ ಇವರನ್ನು ಪತ್ತೆ ಮಾಡಿ, ರಕ್ಷಿಸಿತು. ಟಿಮ್ ಮತ್ತು ಬೆಲ್ಲಾ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.