ಭಯೋತ್ಪಾದಕರ ದೊಡ್ಡದೊಂದು ಸಂಚನ್ನ ಪೊಲೀಸರು ಬಯಲು ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಥವಾ ಕರ್ನಾಟಕ ರಾಜ್ಯದ ಬೇರೆ ಬೇರೆ ಕಡೆ ವಿಧ್ವಂಸಕ ನಡೆಸಲು ಭಯೋತ್ಪಾದಕರು ನಡೆಸಿದ್ದ ಸಂಚನ್ನ ಪೊಲೀಸರು ಫಿನಿಷ್ ಮಾಡಿದ್ದಾರೆ. ಈ ವಿಚಾರದಲ್ಲಿ ಬೆಂಗಳೂರು ನಗರ ಸಿಸಿಬಿ ಪೊಲೀಸರಿಗೆ ಹ್ಯಾಟ್ಸಾಫ್ ಹೇಳಲೇ ಬೇಕು. ಯಾಕಂದ್ರೆ ಐವರು ಉಗ್ರರು ತಮ್ಮ ದುಷ್ಕೃತ್ಯಕ್ಕೆ ಸಂಚು ರೂಪಿಸುವ ಹೊತ್ತಲ್ಲೇ ಪೊಲೀಸರು ಅವರನ್ನ ಬಂಧನ ಮಾಡಿದ್ದಾರೆ. ಆದ್ರೆ, ಈ ಪ್ರಕರಣದ ಕಿಂಗ್ ಪಿನ್ ಮಾತ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಮತ್ತೊಂದು ಆಘಾತಕಾರಿ ಸಂಗತಿ ಅಂದರೆ, ಭಯೋತ್ಪಾದಕ ಕೃತ್ಯದ ಮೂಲ ಪರಪ್ಪನ ಅಗ್ರಹಾರ ಜೈಲು!
ಕೊಲೆಯಿಂದ ಭಯೋತ್ಪಾದನೆವರೆಗೆ..!
ಹೌದು.. ಈ ಎಲ್ಲಾ ಡ್ರಾಮಾ ಶುರುವಾಗಿದ್ದು ಒಂದು ಕೊಲೆಯಿಂದ..! 2017ರಲ್ಲಿ ಬೆಂಗಳೂರಿನ ಆರ್.ಟಿ. ನಗರದಲ್ಲಿ ಒಂದು ಕೊಲೆ ನಡೆದಿತ್ತು. ನೂರ್ ಅಹ್ಮದ್ ಎಂಬಾತನನ್ನ ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಆತನನ್ನ ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳು ಸಾಮಾನ್ಯರೇನಲ್ಲ. ಇವರೆಲ್ಲರೂ ಆರ್.ಟಿ. ನಗರದ ರೌಡಿ ಶೀಟರ್ಗಳು. ಸಣ್ಣ ಪುಟ್ಟ ಕ್ರಿಮಿನಲ್ ಕೆಲಸಗಳನ್ನ ಮಾಡಿಕೊಂಡಿದ್ದ ಈ ರೌಡಿಗಳು, ಆಗಾಗ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡ್ತಿದ್ರು. ಡ್ರೈವರ್, ಮೆಕಾನಿಕ್ ಹೀಗೆ ತಾತ್ಕಾಲಿಕವಾಗಿ ಹಲವಾರು ವೃತ್ತಿ ಮಾಡಿಕೊಂಡಿದ್ದ ಈ ಖದೀಮರು, ಸಂಚು ರೂಪಿಸಿ ಒಬ್ಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿದ್ದರು. ನೂರ್ ಅಹಮದ್ ಎಂಬುವರನ್ನ 2017ರಲ್ಲಿ ಕಿಡ್ನಾಪ್ ಮಾಡಿದ್ದ ಈ ಆರೋಪಿಗಳು, ನಂತರ ಅವರನ್ನ ಕೊಲೆ ಕೂಡಾ ಮಾಡಿ ಬಿಟ್ಟಿದ್ರು. ಅವತ್ತಿನಿಂದಲೇ ಇವರೆಲ್ಲರ ಬಂಧನಕ್ಕೆ ಬೆಂಗಳೂರು ನಗರ ಪೊಲೀಸರು ತನಿಖೆ ನಡೆಸ್ತಿದ್ದರು. ಕೊರೊನಾ ಟೈಮ್ನಲ್ಲಿ 2020ರಲ್ಲಿ ಈ ಆರೋಪಿಗಳು ಪೊಲೀಸರ ಕೈಗೆ ಬಿದ್ದರು. ಆಗ ಒಟ್ಟು 21 ಮಂದಿ ಆರೋಪಿಗಳು ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದರು. ಆದರೆ, ಇವರೆಲ್ಲರ ಪೈಕಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದು 6 ಮಂದಿ ಮಾತ್ರ.
ಪರಪ್ಪನ ಅಗ್ರಹಾರದಲ್ಲೇ ಉಗ್ರ ಕೃತ್ಯಕ್ಕೆ ಟ್ರೈನಿಂಗ್?
ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದವರು ಜೈಲಿನಿಂದ ಹೊರಗೆ ಬರೋ ಹೊತ್ತಿಗೆ ಉಗ್ರರಾಗಲು ಸಾಧ್ಯವೇ? ಹೌದು ಎನ್ನುವಂತಿದೆ ಈ ಕೇಸ್..! ಯಾಕಂದ್ರೆ, ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ 21 ಮಂದಿಯ ಪೈಕಿ, 6 ಮಂದಿಗೆ ಇದೇ ಜೈಲ್ನಲ್ಲಿ ಇದ್ದ ಉಗ್ರನೊಬ್ಬನ ಜೊತೆ ಸಂಪರ್ಕ ಬೆಳೆದಿತ್ತು. ಆತನ ಹೆಸರು ಟಿ.ನಜೀರ್. ಮೂಲತಃ ಕೇರಳದವನಾದ ನಜೀರ್, ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವನು ಅನ್ನೋ ಮಾಹಿತಿ ಇದೆ. 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಈತ. ಬರೋಬ್ಬರಿ 19 ಕೇಸ್ಗಳು ನಜೀರ್ ಮೇಲೆ ಇದೆ. ಆರ್ಟಿ ನಗರ ಕೊಲೆ ಕೇಸ್ನ 6 ಆರೋಪಿಗಳು, ಉಗ್ರ ನಜೀರ್ ಜೊತೆ ಗೆಳೆತನ ಸಾಧಿಸಿದ್ರು. ಉಗ್ರ ನಜೀರ್ ಈ ಎಲ್ಲ ಆರೋಪಿಗಳ ತಲೆಯಲ್ಲಿ ಭಯೋತ್ಪಾದನೆ, ಧರ್ಮಾಂಧತೆ ತುಂಬಿದ ಅನ್ನೋ ಆರೋಪ ಇದೆ. ಭಯೋತ್ಪಾದಕ ಕೃತ್ಯ ಎಸಗೋದಕ್ಕೆ ಜೈಲಿನಲ್ಲೇ ಸಂಚನ್ನೂ ರೂಪಿಸಿದ. ಹೀಗಾಗಿ, ಕೊಲೆ ಕೇಸ್ನ ಆರೋಪಿಗಳ ತಲೆಯಲ್ಲಿ ಉಗ್ರವಾದದ ಮೊಳಕೆ ಒಡೆದಿತ್ತು. 18 ತಿಂಗಳ ಕಾಲ ಜೈಲಿನಲ್ಲಿ ಇದ್ದ ಈ ಆರೋಪಿಗಳು ಬೇಲ್ ಪಡೆದು ರಿಲೀಸ್ ಆಗೋ ಹೊತ್ತಿಗೆ ಹೊಸ ಸಂಚೊಂದನ್ನ ತಲೆಯಲ್ಲಿ ತುಂಬಿಕೊಂಡಿದ್ರು ಅನ್ನೋ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.
ಜೈಲಿನಿಂದ ಹೊರಬಿದ್ದ ಕೂಡಲೇ ವಿಧ್ವಂಸಕ ಕೃತ್ಯಕ್ಕೆ ಸಂಚು!
ಕೊಲೆ ಕೇಸ್ನಲ್ಲಿ 18 ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರು ಆರೋಪಿಗಳು ಜೈಲಿನಿಂದ ಹೊರಬಿದ್ದ ಕೂಡಲೇ ಉಗ್ರ ಕೃತ್ಯ ಎಸಗೋಕೆ ಸಂಚು ರೂಪಿಸಲು ಶುರು ಮಾಡಿದ್ರು. ಈ 6 ಮಂದಿ ಪೈಕಿ ಪ್ರಮುಖ ಆರೋಪಿ ಜುನೈದ್ ಉಗ್ರ ಸಂಚಿನ ಮಾಸ್ಟರ್ ಮೈಂಡ್. ಸದ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಈತ ತನ್ನ ಐವರು ಸಹಚರರಿಗೆ ಹಣಕಾಸಿನ ನೆರವು ನೀಡ್ತಿದ್ದ. ಕೊಲೆ ಕೇಸ್ನ ಎ1 ಆರೋಪಿ ಆಗಿದ್ದ ಈತ, ವಿದೇಶದಿಂದ ಗೂಗಲ್ ಪೇ ಸೇರಿದಂತೆ ಆನ್ಲೈನ್ ಮೂಲಕ ಹಣ ರವಾನೆ ಮಾಡ್ತಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈತನ ಬಗ್ಗೆ ಕೇಂದ್ರೀಯ ತನಿಖಾ ತಂಡಗಳಿಗೂ ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ಧಾರೆ. ಈತನ ಐವರು ಸಹಚರರು 25 ರಿಂದ 30 ವರ್ಷ ವಯಸ್ಸಿನವರು. ಇವರೆಲ್ಲರೂ ಬೆಂಗಳೂರಿನ 10 ಕಡೆ ಸ್ಫೋಟ ನಡೆಸೋಕೆ ಸಂಚು ರೂಪಿಸಿದ್ದರು ಅನ್ನೋ ವಿಚಾರ ಗೊತ್ತಾಗಿದೆ. ಇವರೆಲ್ಲರನ್ನೂ ಸಿಸಿಬಿ ಪೊಲೀಸರು ಬಂಧಿಸಿದಾಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಿಕ್ಕಿದೆ. 7 ಕಂಟ್ರಿ ಮೇಡ್ ಪಿಸ್ತೂಲ್, 40 ಗುಂಡುಗಳು, ಎರಡು ಡ್ರ್ಯಾಗರ್ಗಳು, ಮೊಬೈಲ್, ವಾಕಿ ಟಾಕಿ ಸಿಕ್ಕಿದೆ. ಇವರೆಲ್ಲರಿಗೂ ಹಣಕಾಸು ನೆರವು ನೀಡ್ತಿರುವ ಸಂಘಟನೆ ಯಾವುದು ಅನ್ನೋದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ. ಈ ಕುರಿತಾಗಿ ಎನ್ಐಎ ರೀತಿಯ ಕೇಂದ್ರದ ತನಿಖಾ ತಂಡಗಳ ನೆರವನ್ನ ಪೊಲೀಸರು ಪಡೆಯಬಹುದು.
ಜೈಲುಗಳೇ ಉಗ್ರ ತರಬೇತಿ ಕೇಂದ್ರವಾದರೆ ಹೇಗೆ?
ಕೊಲೆ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳಿಗೆ ಜೈಲಿನಲ್ಲೇ ಉಗ್ರವಾದದ ತರಬೇತಿ ಸಿಗುತ್ತೆ ಅಂದ್ರೆ ಇದು ನಿಜಕ್ಕೂ ಆಘಾತಕಾರಿ ವಿಚಾರ. ಜೈಲಿನಲ್ಲಿದ್ದ ಜುನೈದ್, ಮುದಾಸೀರ್, ಫೈಜಲ್ ರಬ್ಬಾನಿ, ಸುಹೇಲ್, ಉಮರ್ ಸೇರಿದಂತೆ ಹಲವು ಆರೋಪಿಗಳಿಗೆ ಬಂಧಿತ ಉಗ್ರ ಟಿ.ನಜೀರ್ ಉಗ್ರವಾದದ ವಿಷ ಬೀಜವನ್ನ ಜೈಲಿನಲ್ಲೇ ಬಿತ್ತಿದ್ದ ಅನ್ನೋ ಮಾಹಿತಿಯನ್ನ ಖುದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರೇ ನೀಡಿದ್ಧಾರೆ. ಈ ಮೂಲಕ, ಜೈಲುಗಳು ಉಗ್ರರ ತಯಾರಿ ಕೇಂದ್ರವೂ ಆಗ್ತಿದೆಯಾ ಅನ್ನೋ ಅನುಮಾನವೂ ಸೃಷ್ಟಿಯಾಗ್ತಿದೆ. ಜೈಲುಗಳಲ್ಲಿ ಕಾಲ ಕಾಲಕ್ಕೆ ದಾಳಿ ಹಾಗೂ ಪರಿಶೀಲನೆ ನಡೆಯುತ್ತದೆ ಎಂದು ಪೊಲೀಸರೇನೋ ಹೇಳ್ತಾರೆ. ಆದ್ರೆ, ಜೈಲಿನಲ್ಲಿ ಇರುವ ಕೈದಿಗಳು ಹೊರ ಪ್ರಪಂಚದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರ್ತಾರೆ, ಅವರಿಗೆ ಬೇಕಾದ ಎಲ್ಲ ಸವಲತ್ತುಗಳೂ ಸಿಗ್ತಿವೆ ಅನ್ನೋ ಆರೋಪ ಹೊಸದೇನಲ್ಲ. ಇವೆಲ್ಲವೂ ಓಪನ್ ಸೀಕ್ರೆಟ್ ರೀತಿ ಆಗಿ ಹೋಗಿದೆ. ಆದ್ರೆ, ಸಾಮಾನ್ಯ ರೌಡಿ ಶೀಟರ್ಗಳು, ಕೊಲೆ ಕೇಸ್ನಲ್ಲಿ ಸಿಕ್ಕಿ ಬಿದ್ದು ಅಂತಿಮವಾಗಿ ಉಗ್ರವಾಗಿ ಬದಲಾಗಲು ಜೈಲುಗಳೇ ತರಬೇತಿ ಕೇಂದ್ರವಾಗಿ ಬದಲಾದರೆ ಹೇಗೆ ಅನ್ನೋದು ಇಲ್ಲಿ ಅತಿ ಮುಖ್ಯ ಪ್ರಶ್ನೆ. ಇನ್ನು ಈಗಾಗಲೇ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ವಿರುದ್ಧ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಗೆ ತರಬೇತಿ ನೀಡಿದ ಉಗ್ರ ಟಿ. ನಜೀರ್ ಇನ್ನೂ ಜೈಲಿನಲ್ಲೇ ಇದ್ದಾನೆ. ಈತನನ್ನ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಬಹುದು. ಆದ್ರೆ, ಜೈಲಿನಲ್ಲಿ ನಡೆಯೋ ಇಂಥಾ ಕೃತ್ಯಗಳಿಗೆ ಕಡಿವಾಣ ಬೀಳೋದು ಯಾವಾಗ? ಜೈಲಿನಲ್ಲಿ ತಯಾರಾಗುವ ಕ್ರಿಮಿನಲ್ಗಳು ಬೆಂಗಳೂರಿನ 10 ಕಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಾರೆ ಎಂದರೆ ಇದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ!
ಉಗ್ರರ ಮಟ್ಟ ಹಾಕಲು ಕೇಂದ್ರದ ತನಿಖಾ ತಂಡಗಳೇ ಬೇಕಾ?
ಈ ಹಿಂದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ನಲ್ಲೂ ಕೂಡಾ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಶಂಕಿತ ಉಗ್ರನಿಗೆ ಜೈಲಿನಲ್ಲಿ ತರಬೇತಿ ಸಿಕ್ಕಿತ್ತು ಅನ್ನೋ ಊಹಾಪೋಹಗಳು ಕೇಳಿ ಬಂದಿದ್ವು. ಜೈಲಿನಲ್ಲೇ ಸೃಷ್ಟಿಯಾಗುವ ಇಂಥಾ ಕೆಲವು ದುಷ್ಟರು ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಮಹಾ ನಗರಕ್ಕೆ ಮುಳುವಾದರೆ ಹೇಗೆ? ಇಂಥವರ ವಿರುದ್ಧ ತನಿಖೆ ನಡೆಸಲು ಎನ್ಐಎನಂಥಾ ಸಮರ್ಥ ತಂಡವೇ ಬೇಕಾ? ಅಥವಾ ದುಷ್ಕೃತ್ಯ ಎಸಗುವ ಮುನ್ನವೇ ಶಂಕಿತ ಉಗ್ರರನ್ನು ಬಂಧಿಸಿದ ಕರ್ನಾಟಕ ಪೊಲೀಸರೇ ಈ ಪ್ರಕರಣದ ತನಿಖೆಗೆ ಸಮರ್ಥವೇ? ಸರ್ಕಾರವೇ ಉತ್ತರಿಸಬೇಕು.