ಕುಂದಾಪುರ ತಾಲೂಕಿನ ದಬ್ಬೆಕಟ್ಟೆ ಸರ್ಕಲ್‌ನಲ್ಲಿ ಬುಧವಾರ ತಡರಾತ್ರಿ ಗಂಟೆ 2ರ ಸುಮಾರಿಗೆ ರಸ್ತೆಯ ಬದಿಯಲ್ಲಿ ನಿಂತಿದ್ದು ಸುಮಾರು ಆರು ವರ್ಷದ ಹೆಣ್ಣು ಮಗುವನ್ನು ರಕ್ಷಿಸಿ, ಮಾನವೀಯತೆ ಮೆರೆದ ಘಟನೆ ಸಂಭವಿಸಿದೆ.
ಘಟನೆ: ಎಂದಿನಂತೆ ಇಲ್ಲಿನ ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾರುಕೊಟ್ಟಿಗೆ ಅರ್ಚನಾ ಬಾರ್ ಇದರ ಸಿಬಂದಿ ವಿಶ್ವನಾಥ ಪೂಜಾರಿ ಅವರು ಕರ್ತವ್ಯ ಮುಗಿಸಿ, ಹುಣ್ಸೆಮಕ್ಕಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂರ್ಭದಲ್ಲಿ ಸರಿ ಸುಮಾರು 2 ಗಂಟೆಯ ಹೊತ್ತಿಗೆ ದಬ್ಬೆಕಟ್ಟೆ, ತೆಕ್ಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಯ ಸಮೀಪದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಏನು ಅರಿಯದ ಸುಮಾರು ನಾಲ್ಕುವರೆ ವರ್ಷದ ಹೆಣ್ಣು ಮಗುವೊಂದು ಮೈಮೇಲೆ ಬಟ್ಟೆ ಇಲ್ಲದೆ ಬೆತ್ತಲಾಗಿ ಕೆದೂರು ಶ್ರೀ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ತೆರಳಲು ಅಳವಡಿಸಿದ ನಾಮಫಲಕದ ಕೆಳಗೆ ನಿಂತಿದೆ.
ಇದನ್ನು ನೋಡಿದ ವಿಶ್ವನಾಥ ಪೂಜಾರಿ ಅವರು ಒಂದು ಕ್ಷಣ ಧಂಗಾಗಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಆಲೋಚಿಸಿ ಪ್ರತಿಯೊಂದು ಚಿತ್ರಣವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು ಮಗುವಿನ ರಕ್ಷಣೆಗೆ ಮುಂದಾಗಿದ್ದು, ಸಮೀಪದಲ್ಲಿರುವ ಮನೆಯವರ ಗಮನಕ್ಕೆ ತರುವ ಮೂಲಕ ಮಗುವಿನ ಪೂರ್ವಪರವನ್ನು ವಿಚಾರಿಸಿ, ಅಲ್ಲಿಂದ ಸುಮಾರು 200 ಮೀಟರ್ ದೂರದಲ್ಲಿರುವ ಗುಟ್ರಗೋಡು ನಲ್ಲಿರುವ ಮನೆಗೆ ತೆರಳಿ ಪೋಷಕರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಾತ್ರಿ ನಿದ್ದೆಗಣ್ಣಿನಿಂದ ಎದ್ದು ಮನೆಯಿಂದ ಹೊರಬಂದ ಮಗು ?:
ಎಲ್‌ಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗು ರಾತ್ರಿ ನಿದ್ದೆಗಣ್ಣಿನಲ್ಲಿ ಮನೆಯ ಬಾಗಿಲು ತೆಗೆದು ಹೊರಬಂದಿದೆ ಎಂದು ಹೇಳಲಾಗಿದ್ದು, ಮಗುವಿನ ರಕ್ಷಣೆಯ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವಾಮಿ ಕೊರಗಜ್ಜನ ಪವಾಡ !:
ತಡರಾತ್ರಿ ಹೆಣ್ಣು ಮಗುವೊಂದು ಪ್ರಮುಖ ಮಾರ್ಗದ ಬದಿಯಲ್ಲಿ ಸುಮಾರು ಆರು ವರ್ಷದ ಮುಗ್ಧ ಹೆಣ್ಣು ಮಗುವೊಂದು ಮೈಮೇಲೆ ಬಟ್ಟೆ ಇಲ್ಲದೆ ಬೆತ್ತಲಾಗಿ ಕೆದೂರು ಶ್ರೀ ಸ್ವಾಮಿ ಕೊರಗಜ್ಜನ ಕ್ಷೇತ್ರಕ್ಕೆ ತೆರಳಲು ಅಳವಡಿಸಿದ ನಾಮಫಲಕದ ಕೆಳಗೆ ನಿಂತಿದ್ದು, ಹೆಣ್ಣು ಮಗುವಿಗೆ ಯಾವುದೇ ಅನಾಹುತವಾಗದೆ ಶ್ರೀ ಸ್ವಾಮಿ ಕೊರಗಜ್ಜ ರಕ್ಷಿಸಿದ್ದಾನೆ ಎನ್ನುವುದು ನಂಬಿಕೆ ಗ್ರಾಮಸ್ಥರ ನಂಬಿಕೆ.