ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಅಂಗನವಾಡಿ, ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಜಿಲ್ಲಾಡಳಿತ ಸೂಚನೆ
ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ, ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಜಿಲ್ಲಾಡಳಿತದಿಂದ ಸೂಚಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸಬೇಕು, ಮೀನುಗಾರರು
ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು
ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.