ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ ಬೆಳಂಬೆಳಗ್ಗೆಯೇ ಠಿಕಾಣಿ ಹೂಡುತ್ತಿದ್ದಾರೆ.
ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಪಡಿತರ ಚೀಟಿ ತಿದ್ದುಪಡಿ, ಆಧಾರ್ ತಿದ್ದುಪಡಿ, ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸುವುದು ಸೇರಿದಂತೆ ನಾನಾ ಕೆಲಸಗಳಿಗಾಗಿ ಬ್ಯಾಂಕ್, ಸೇವಾ ಕೇಂದ್ರ, ತಾಲೂಕು ಕಚೇರಿಗಳ ಬಳಿ ಜನಸಂದಣಿ ಹೆಚ್ಚಾಗಿದೆ. ಯೋಜನೆಯ ನೋಂದಣಿ ಆರಂಭವಾದ ದಿನದಿಂದಲೂ ಫಲಾನುಭವಿಗಳು ಸೂಕ್ತ ದಾಖಲೆ ಒದಗಿಸಲಾಗದೆ, ಸೇವಾ ಕೇಂದ್ರಗಳ ಬಳಿ ನಿರಾಸೆ ಹೊರಹಾಕುತ್ತಿದ್ದಾರೆ.
ತಾಲೂಕು ಕಚೇರಿ ಆವರಣದಲ್ಲಿರುವ ಆಹಾರ ಇಲಾಖೆ ಕಚೇರಿ ಬಳಿ ಮಹಿಳೆಯರು ಪಡಿತರ ಚೀಟಿ ತಿದ್ದುಪಡಿ, ಹೆಸರು ಸೇರ್ಪಡೆ, ಆಧಾರ್ ತಿದ್ದುಪಡಿಗೆ ನಾ ಮುಂದು, ತಾ ಮುಂದು ಎಂಬಂತೆ ಕಚೇರಿಗೆ ನುಗ್ಗಲು ಯತ್ನಿಸಿದರೆ, ಸರ್ವರ್ ಸಮಸ್ಯೆ ಎಂದು ಸಿಬ್ಬಂದಿ ಹೇಳಿದಾಗ ಕೆಲವು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೇಕಾದ ದಾಖಲೆಗಳೇನು?
ಯಜಮಾನಿ ಎಂದು ನಮೂದಾಗಿರುವ ಅಥವಾ ಯಜಮಾನಿ ಪತಿ ಎಂದು ನಮೂದಾಗಿರುವ ಆಧಾರ್ ಕಾರ್ಡ್ ಸಂಖ್ಯೆ, ಅಧಾರ್‌ಗೆ ಜೋಡಣೆಯಾದ ಬ್ಯಾಂಕ್ ಪಾಸ್‌ಬುಕ್ ಅಥವಾ ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ವಿವರ ದಾಖಲೆಗಳು. ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಯಾಗಿದ್ದರೆ ವಿಳಾಸ ಬದಲಿದ್ದರೂ ಸಹ ನೋಂದಣಿಗೆ ಅವಕಾಶ ನೀಡಲಾಗಿದೆ. ಆಧಾರ್ ಜೋಡಣೆಯಾದ ಮೊಬೈಲ್ ನಂಬರ್ ನಿಷ್ಕಿ್ರಯಗೊಂಡಿದ್ದರೂ ಬಯೋಮೆಟ್ರಿಕ್ ಮೂಲಕ ಬೆರಳಚ್ಚು ನೀಡಿ ಆಧಾರ್ ದೃಢೀಕರಿಸಬಹುದು.
ಮೆಸೇಜ್‌ಗಾಗಿ ಪರದಾಟ:
ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಫಲಾನುಭವಿಗಳ ಪಡಿತರ ಚೀಟಿಯ ನಂಬರ್ ಹಾಕಿ ಸಹಾಯವಾಣಿ ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು. ಒಂದೆರಡು ಸೆಕೆಂಡ್‌ಗಳಲ್ಲಿಇಲಾಖೆಯಿಂದ ವಾಪಸ್ ಎಸ್‌ಎಂಎಸ್ ಬರುತ್ತದೆ ಎಂದು ತಿಳಿಸಿದ್ದರೂ ಒಟಿಪಿ ಹಾಗೂ ಮೆಸೇಜ್ ಬೇಗ ಬಾರದೆ ಕಂಪ್ಯೂಟರ್ ಆಪರೇಟರ್‌ಗಳು ಹಾಗೂ ಫಲಾನುಭವಿಗಳು ಪರದಾಡುವಂತಾಗಿದೆ. ಇನ್ನೂ ಕೆಲವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ದೃಶ್ಯ ಸಾಮಾನ್ಯವಾಗಿದೆ.