ಮೊಬೈಲ್ ಕದ್ದು ಅವುಗಳ ಮುಖಾಂತರ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣ ಲಪಟಾಯಿಸುತ್ತಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಹಾವೇರಿಯ ಗುತ್ತಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಾಯಿಕುಮಾರ್, ಅಕುಲ್ ವಡಿವೇಲು ಎಂದು ಗುರುತಿಸಲಾಗಿದೆ. ಬಂಧಿತ ಮತ್ತೋರ್ವ 12ರ ಅಪ್ರಾಪ್ತನಾಗಿದ್ದಾನೆ. ಆರೋಪಿಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮೂಲದವರಾಗಿದ್ದಾರೆ. ಬಂಧಿತರಿಂದ 1.36 ಲಕ್ಷ ರೂ., 27 ವಿವಿಧ ಕಂಪನಿಯ ಮೊಬೈಲ್‍ಗಳನ್ನು ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಸ್ ಹಾಗೂ ಜನ ಸಂದಣಿಯ ಪ್ರದೇಶಗಳಲ್ಲಿ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಮೊಬೈಲ್ ಎಗರಿಸುತ್ತಿದ್ದರು. ಬಳಿಕ ಕದ್ದ ಮೊಬೈಲ್‍ಗಳಿಂದ ಫೋನ್ ಪೇ ಹಾಗೂ ಗೂಗಲ್ ಪೇ ಪಾಸ್‍ವರ್ಡ್‍ಗಳನ್ನು ಬದಲಿಸುತ್ತಿದ್ದರು. ಬಳಿಕ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಹಲವು ಇದೇ ರೀತಿಯ ಪ್ರಕರಣದಲ್ಲಿ ಆರೋಪಿಗಳು ತೊಡಗಿದ್ದು ತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗೂಣಾರೆ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಪವಾರ್ ಹಾಗೂ ಪಿಎಸ್‍ಐ ಶಂಕರಗೌಡ ಪಾಟೀಲ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
NESARA|| WhatsApp ||GROUPS |
---|
💢ಜಾಹೀರಾತು💢