ವಿಷಕಾರಿ ಹಾವು ಕಡಿತಕ್ಕೆ ತುತ್ತಾದರೆ ಏನು ಮಾಡಬೇಕು?

ಶೇರ್ ಮಾಡಿ

ನಮ್ಮ ದೇಶವು ಹಲವು ಪ್ರಭೇದಗಳ ಹಾವುಗಳ ಆವಾಸಸ್ಥಾನವಾಗಿದೆ. ಇವುಗಳಲ್ಲಿ ಕೆಲವು ಅತ್ಯಂತ ವಿಷಕಾರಿಯಾಗಿದ್ದು, ಮನುಷ್ಯನಿಗೆ ಪ್ರಾಣಾಂತಿಕವಾಗಿವೆ. ವಿಷಕಾರಿ ಹಾವುಗಳ ಕಡಿತ ಭಾರತದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಒಂದು ಗಂಭೀರ ಸವಾಲಾಗಿದ್ದು, ಪ್ರತೀ ವರ್ಷ ಇದರಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇತ್ತೀಚೆಗಿನ ಒಂದು ಅಧ್ಯಯನದ ಪ್ರಕಾರ, ಪ್ರತೀ ವರ್ಷ ವಿಷಕಾರಿ ಹಾವುಗಳ ಕಡಿತದಿಂದಾಗಿ ಸರಿಸುಮಾರು 58 ಸಾವಿರ ಮಂದಿ ಸಾವನ್ನಪ್ಪುತ್ತಾರೆ.


ಹಾವುಗಳ ಕಡಿತದಿಂದಾಗಿ ಆರೋಗ್ಯ ಸಮಸ್ಯೆ, ಪ್ರಾಣಾಪಾಯ ಉಂಟಾಗುವುದು ಗ್ರಾಮೀಣ ಪ್ರದೇಶಗಳು ಮತ್ತು ಕೃಷಿ ಪ್ರದೇಶಗಳಲ್ಲಿಯೇ ಹೆಚ್ಚು. ಹಾವುಗಳ ಆವಾಸ ಸ್ಥಾನಕ್ಕೆ ಈ ಪ್ರದೇಶಗಳು ಸಮೀಪದಲ್ಲಿರುವುದೇ ಇದಕ್ಕೆ ಕಾರಣ. ರೈತರು ಮತ್ತು ಕೃಷಿ ಕಾರ್ಮಿಕರು ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಥವಾ ಕೃಷಿ ಉಪಕರಣಗಳಿಂದ ಕೆಲಸ ಮಾಡುತ್ತಿರುವಾಗ ಹಾವುಗಳ ಜತೆಗೆ ನೇರ ಸಂಪರ್ಕಕ್ಕೆ ಬರುವ ಕಾರಣ ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿಯೇ ವಿಷಕಾರಿ ಹಾವುಗಳ ಕಡಿತ ಉಂಟಾಗುವುದು ಹೆಚ್ಚು.
ಹಾವುಗಳ ಕಡಿತಕ್ಕೆ ತುತ್ತಾಗುವ ಕೃಷಿ ಚಟುವಟಿಕೆಗಳು ಹೆಚ್ಚಿರುವುದರ ಜತೆಗೆ ಗ್ರಾಮೀಣ ಕರ್ನಾಟಕವು ಹಲವು ಪ್ರಭೇದಗಳ ಹಾವುಗಳನ್ನು ಹೊಂದಿರುವ ಕಾರಣ ಈ ಭಾಗದಲ್ಲಿ ವಿಷಕಾರಿ ಹಾವಗಳ ಕಡಿತ ಪ್ರಕರಣಗಳು ವರದಿಯಾಗುವುದು ಅಧಿಕ. ಹಾವು ಕಡಿತದ ಪ್ರಕರಣಗಳು ಮಳೆಗಾಲದ ಅವಧಿ (ಜೂನ್‌ನಿಂದ ಸೆಪ್ಟಂಬರ್‌)ಯಲ್ಲಿ ವರದಿಯಾಗುವುದು ಹೆಚ್ಚು.

ಬಹುತೇಕ ಹಾವು ಕಡಿತಗಳು ಮಾರಣಾಂತಿಕವಲ್ಲ ಮತ್ತು ಸರಿಯಾದ ವೈದ್ಯಕೀಯ ಆರೈಕೆಯಿಂದ ಚಿಕಿತ್ಸೆ ನೀಡಬಹುದು. ಆದರೆ ಈ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವಿನ ಕೊರತೆ ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಪ್ರಾಣಾಪಾಯಗಳು ಸಂಭವಿಸುತ್ತವೆ. ವೈವಿಧ್ಯ ಪರಿಸರವನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವು ಪ್ರಭೇದಗಳ ವಿಷಕಾರಿ ಹಾವುಗಳು ಕಂಡುಬರುತ್ತವೆ. ನಾಗರಹಾವು, ಮಂಡಲ ಹಾವು, ಗರಗಸ ಮಂಡಲ, ಕಟ್ಟು ಹಾವು, ಕೊಳಕು ಮಂಡಲ ಇವುಗಳಲ್ಲಿ ಕೆಲವು.

ಯಾವ ಜಾತಿಯ ಹಾವು ಕಡಿದಿದೆ ಮತ್ತು ಎಷ್ಟು ವಿಷ ದೇಹವನ್ನು ಸೇರಿದೆ ಎಂಬುದನ್ನು ಆಧರಿಸಿ ಹಾವು ಕಡಿತದಿಂದ ಉಂಟಾಗುವ ಅನಾರೋಗ್ಯ ಲಕ್ಷಣಗಳು ಬದಲಾಗುತ್ತವೆ. ಸಾಮಾನ್ಯವಾಗಿ ಹಾವು ಕಡಿತಕ್ಕೆ ಒಳಗಾದವರು ತತ್‌ಕ್ಷಣದ ನೋವಿಗೆ ತುತ್ತಾಗುತ್ತಾರೆ ಮತ್ತು ಹಾವು ಕಡಿದ ದೇಹಭಾಗದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ.
ನೋವಿನ ತೀವ್ರತೆಯು ಕ್ಷಿಪ್ರವಾಗಿ ಹೆಚ್ಚಬಹುದಾಗಿದೆ ಮತ್ತು ದೇಹದ ಇತರ ಭಾಗಗಳಿಗೂ ವ್ಯಾಪಿಸಬಹುದಾಗಿದೆ. ರಕ್ತಕಲೆ, ಕೆಂಪಾಗುವುದು ಮತ್ತು ಗುಳ್ಳೆಗಳು ಕೂಡ ಕಾಣಿಸಿಕೊಳ್ಳಬಹುದು. ಹಾವಿನ ವಿಷ ದೇಹದ ಪ್ರಮುಖ ಅಂಗಗಳಿಗೆ ವ್ಯಾಪಿಸಿದರೆ ಅಥವಾ ದೇಹದ ರಕ್ತ ಹೆಪ್ಪುಗಟ್ಟುವ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದರೆ ಸಂಕೀರ್ಣ ಸಮಸ್ಯೆಗಳು ತಲೆದೋರುತ್ತವೆ. ದೇಹ ವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳೆಂದರೆ ತಲೆ ತಿರುಗುವುದು, ಹೊಟ್ಟೆ ತೊಳೆಸುವುದು, ವಾಂತಿ, ಬೆವರುವುದು ಮತ್ತು ಉಸಿರಾಟ ಕಷ್ಟವಾಗುವುದು. ಗರಗಸ ಮಂಡಲದಂತಹ ಕೆಲವು ವಿಷದ ಹಾವುಗಳ ಕಡಿತದಿಂದಾಗಿ ತೀವ್ರ ತರಹದ ರಕ್ತಸ್ರಾವ, ಮೂತ್ರಪಿಂಡಗಳಿಗೆ ಹಾನಿ ಉಂಟಾಗಬಹುದಾಗಿದ್ದು, ಇವು ಪ್ರಾಣಾಂತಿಕ ಸಮಸ್ಯೆಗಳಾಗಿರುತ್ತವೆ.

ಎಲ್ಲ ಹಾವುಗಳ ಕಡಿತಗಳು ಕೂಡ ವಿಷಕಾರಿಯಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಆದರೆ ಹಾವಿನ ಕಡಿತ ವಿಷಕಾರಿಯಲ್ಲ ಎಂಬುದು ಖಚಿತವಾಗುವವರೆಗೂ ಎಚ್ಚರಿಕೆಯಿಂದ ಇರುವುದು ಹಾಗೂ ಕಡಿತವಾದ ತತ್‌ಕ್ಷಣ ವೈದ್ಯಕೀಯ ಆರೈಕೆ ಪಡೆಯುವುದು ಯಾವಾಗಲೂ ಸುರಕ್ಷಿತ. ವೈದ್ಯಕೀಯ ಚಿಕಿತ್ಸೆ ಪಡೆಯುವುದು ವಿಳಂಬವಾದರೆ ಸಂಕೀಣ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಅಧಿಕ ಮತ್ತು ಪರಿಣಾಮ ಗಂಭೀರವಾಗಿರುತ್ತದೆ.

ಹಾವು ಕಡಿತಕ್ಕೆ ಒಳಗಾದರೆ ಏನು ಮಾಡಬಾರದು? ­
ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಇದರಿಂದ ಮತ್ತೆ ಹಾವಿನ ಕಡಿತಕ್ಕೆ ಒಳಗಾಗಬಹುದು. ಇದಕ್ಕೆ ಬದಲಾಗಿ ಹಾವಿನ ಗುಣಲಕ್ಷಣಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ಅಥವಾ ಸುರಕ್ಷಿತವಾಗಿ ಅದರ ಫೊಟೊ ತೆಗೆಯಲು ಸಾಧ್ಯವಾದರೆ ತೆಗೆಯಿರಿ.

ಬಟ್ಟೆ ಅಥವಾ ಇನ್ಯಾವುದೇ ರೀತಿಯಿಂದ ಕಟ್ಟು ಕಟ್ಟಬೇಡಿ.
ಚಾಕು/ಹರಿತವಾದ ಆಯುಧದಿಂದ ಗಾಯವದ ಭಾಗವನ್ನು ಸೀಳಬೇಡಿ.
ವಿಷವನ್ನು ಬಾಯಿಯಿಂದ ಹೀರಿ ತೆಗೆಯಲು ಪ್ರಯತ್ನಿಸಬೇಡಿ.
ಸಾಂಪ್ರದಾಯಿಕ/ನಾಟಿ ಚಿಕಿತ್ಸೆಗೆ ಮುಂದಾಗಬೇಡಿ.
ಮಂಜುಗಡ್ಡೆ ಇರಿಸಬೇಡಿ.
ನೋವು ನಿವಾರಕವಾಗಿ ಆಲ್ಕೊಹಾಲ್‌ ಹಾಕಬಾರದು.
ಕೆಫಿನ್‌ಯುಕ್ತ ಪಾನೀಯಗಳನ್ನು ಕುಡಿಯಬಾರದು.

ಹಾವು ಕಡಿತಕ್ಕೆ ತುತ್ತಾದರೆ ಏನು ಮಾಡಬೇಕು?
ಗಾಬರಿಗೊಳ್ಳದೆ ಸಮಾಧಾನದಿಂದ ಇರಬೇಕು ಮತ್ತು ಹಾವು ಕಡಿತಕ್ಕೀಡಾದ ಕಾಲು/ಕೈ/ದೇಹಭಾಗವನ್ನು ನಿಶ್ಚಲವಾಗಿ ಇರಿಸುವ ಮೂಲಕ ವಿಷ ಹರಡುವುದು ನಿಧಾನವಾಗುವಂತೆ ಮಾಡಬೇಕು.
ಹಾವು ಕಡಿತಕ್ಕೀಡಾದ ಸ್ಥಳದ ಸಮೀಪ ರಕ್ತ ಪರಿಚಲನೆಗೆ ತಡೆಯಾಗಬಲ್ಲ ಬಿಗಿಯಾದ ಉಡುಪು, ಆಭರಣ ಇದ್ದರೆ ತೆಗೆಯಬೇಕು.
ತತ್‌ಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು; ಹಾವು ಕಡಿತದ ಪ್ರಕರಣಗಳನ್ನು ನಿರ್ವಹಿಸುವ ಸೌಲಭ್ಯಗಳಿರುವ ಆಸ್ಪತ್ರೆ, ಕ್ಲಿನಿಕ್‌ ಆದರೆ ಉತ್ತಮ.
ತತ್‌ಕ್ಷಣ ಆಸ್ಪತ್ರೆಗೆ ಹೋಗುವುದು ಸಾಧ್ಯವಾಗದೆ ಇದ್ದರೆ ಪ್ರಥಮ ಚಿಕಿತ್ಸೆಯನ್ನು ನೀಡಬೇಕು.
ಹಾವು ಕಡಿದ ದೇಹಭಾಗ ಹೃದಯಕ್ಕಿಂತ ಕೆಳಗೆ ಇರುವಂತೆ ಕುಳಿತುಕೊಳ್ಳಬೇಕು ಅಥವಾ ಮಲಗಬೇಕು. ದೈಹಿಕ ಚಲನೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಹಾವು ಕಡಿದ ಗಾಯವನ್ನು ಬಿಸಿ ನೀರಿನಲ್ಲಿ ಸಾಬೂನು ಉಪಯೋಗಿಸಿ ತೊಳೆಯಬೇಕು

Leave a Reply

error: Content is protected !!