ಧೂಮಪಾನವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಾಜ್ಯವನ್ನು ಧೂಮಪಾನ ಮುಕ್ತ ವಲಯವನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿರ್ಬಂಧವಿದೆ. ಆದರೆ 2003ರ ಮೂಲ ಕಾಯ್ದೆ ಸೆಕ್ಷನ್ 4ರಡಿಯಲ್ಲಿ ಹೊಟೇಲ್, ವಾಣಿಜ್ಯ ಮಳಿಗೆ, ಐಟಿ ಬಿಟಿ ಕಚೇರಿ, ಮಾಲ್‌ಗಳಲ್ಲಿ ಧೂಮಪಾನ ವಲಯ ನಿರ್ಮಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಧೂಮಪಾನ ವಲಯಗಳಲ್ಲಿ ಕೋಟ್ಪಾ ಕಾಯ್ದೆಯ ನಿಯಮಾವಳಿ ಉಲ್ಲಂಘಿಸುತ್ತಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಧೂಮಪಾನ ವಲಯ ನಿಷೇಧಿಸಲು ಸರಕಾರಕ್ಕೆ ಕರಡು ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಾರಣವೇನು?
ಧೂಮಪಾನ ವಲಯ ನಿರ್ಮಿಸಲು ಆರೋಗ್ಯ ಇಲಾಖೆಯಿಂದ ಎನ್‌ಒಸಿ ಪಡೆಯುವಾಗ ಕಾಯ್ದೆ ನಿಯಮಾವಳಿ ಪಾಲಿಸುವಂತೆ ಆದೇಶಿಸಲಾಗುತ್ತಿದೆ. ಆದರೆ ಯಾರೂ ಪಾಲಿಸುತ್ತಿಲ್ಲ ಎಂದು ಸರ್ವೇ ಉಲ್ಲೇಖೀಸಿದೆ.
ಕ್ಯಾನ್ಸರ್ ಪ್ರಕರಣಗಳು ಹೆಚ್ಚಳ
ರಾಜ್ಯದಲ್ಲಿ ತಂಬಾಕು ಸಂಬಂಧಿ ಕ್ಯಾನ್ಸರ್ ಮತ್ತಿತರ ಪ್ರಕರಣಗಳು ಹೆಚ್ಚುತ್ತಿವೆ. ಕಿದ್ವಾಯಿ ಸಂಸ್ಥೆಯಲ್ಲಿ 2022ರಲ್ಲಿ ದಾಖಲಾದ 10,496 ಪ್ರಕರಣಗಳಲ್ಲಿ 3,544 ತಂಬಾಕು ಬಳಕೆಯಿಂದ ಉಂಟಾದ ಕ್ಯಾನ್ಸರ್‌ಗಳು. ಇವರಲ್ಲಿ 2,432 ಪುರುಷರು ಹಾಗೂ 1,112 ಮಹಿಳೆಯರಿದ್ದಾರೆ. ಪುರುಷರಲ್ಲಿ ಕಾಣಿಸಿಕೊಂಡ ಶೇ. 51ರಷ್ಟು ಹಾಗೂ ಮಹಿಳೆಯರಲ್ಲಿ ಶೇ. 18ರಷ್ಟು ಕ್ಯಾನ್ಸರ್‌ಗಳು ತಂಬಾಕು ಸೇವನೆಯಿಂದಾಗಿವೆ.