ಹಗಲು ವೇಳೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಬೆಂಗ್ರೆ ಭದ್ರಪಳ್ಳಿ ನಿವಾಸಿ ಫರಾಜ್ (27 ವ) ಹಾಗೂ ಸುರತ್ಕಲ್ ತಾಲೂಕು ಚೊಕ್ಕಬೆಟ್ಟು ಕೃಷ್ಣಾಪುರ 4ನೇ ಬ್ಲಾಕ್ ನಿವಾಸಿ ತೌಸಿಫ್ ಅಹಮ್ಮದ್ (34) ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಟ್ಟು ರೂ. 12,23,000 ಮೌಲ್ಯದ 223 ಗ್ರಾಂ ಚಿನ್ನಾಭರಣ ಮತ್ತು ರೂ 3000 ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3,30,000 ಮೌಲ್ಯದ ಮಹೀಂದ್ರ ಕೈಲೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ 15,56,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ದೇವಮಾತ ಕಾಂಪ್ಲೆಕ್ಸ್ನಲ್ಲಿ ವಾಸವಿರುವ ಮೈಕಲ್ ಡಿಸೋಜಾ ಎಂಬವರ ಮನೆಯ ಎದುರಿನ ಬಾಗಿಲಿನ ಡೋರನ್ನು ಸೆ.01 ರಂದು ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಕೋಣೆಯೊಳಗಿದ್ದ ಕಪಾಟುಗಳಿಂದ 115 ಗ್ರಾಂ ತೂಕದ ಸುಮಾರು 5,36,000 ರೂಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಸುಮಾರು 3,000 ರೂಮೌಲ್ಯದ ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿದ ಘಟನೆ ನಡೆದಿತ್ತು.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ನಿರ್ದೇಶನದಂತೆ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದಲ್ಲಿ ಎಸ್.ಐ.ರಾಮಕೃಷ್ಣ ಅವರ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.
ಆರೋಪಿಗಳ ಪೈಕಿ ಫರಾಜ್ ಎಂಬಾತನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 279/2015 ಕಲಂ: 380 ಐ.ಪಿ.ಸಿಯಂತೆ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 21/2021 ಕಲಂ : 454, 457, 380 ಐ.ಪಿ.ಸಿ ಯಂತೆ ಮನೆಕಳ್ಳತನ ಪ್ರಕರಣ ದಾಖಲಾಗಿವೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಸ್.ಪಿ. ಸಿ.ಬಿ ರಿಷ್ಯಂತ್, ಹೆಚ್ಚುವರಿ ಎಸ್.ಪಿ. ಧರ್ಮಪ್ಪ ಎನ್. ಎಂ. ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್ ನಿರ್ದೇಶನದಂತೆ ಪೋಲಿಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್.ಇ.ಅವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಠಾಣೆಯ ಎಸ್.ಐ.ರಾಮಕೃಷ್ಣ ಅಪರಾಧ ವಿಭಾಗದ ಎಸ್.ಐ ಕಲೈಮಾರ್, ಎ.ಎಸ್.ಐ ನಾರಾಯಣ, ಹೆಡ್ ಕಾನ್ಸ್ಟೇಬಲ್ಗಳಾದ ಇರ್ಷಾದ್ ಪಿ. ರಾಜೇಶ್, ಮನೋಹರ, ಕಾನ್ಸ್ಟೇಬಲ್ಗಳಾದ ಉಮೇಶ್ ಹಿರೇಮಠ, ರಂಗನಾಥ್ ಆರೋಪಿ ಹಾಗೂ ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ ಹಾಗೂ ಜಿಲ್ಲಾ ಗಣಕಯಂತ್ರ ಕೇಂದ್ರದ ದಿವಾಕರ ಮತ್ತು ಸಂಪತ್ ಸಹಕರಿಸಿದ್ದಾರೆ.