ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆ ವೇಳೆ ಏನೇನು ಚರ್ಚೆ ನಡೆಸಿದ್ರು ಹೆಚ್​​ಡಿಕೆ, ಅಮಿತ್ ಶಾ? ಇಲ್ಲಿದೆ ವಿವರ

ಶೇರ್ ಮಾಡಿ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಪ್ಪಂದಕ್ಕೆ ಬಂದಿವೆ. ಈ ವಿಚಾರವಾಗಿ ಶುಕ್ರವಾರ ಸಂಜೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೆಚ್​​ಡಿ ಕುಮಾರಸ್ವಾಮಿ ಹಾಗೂ ಇತರರು ಒಮ್ಮತಕ್ಕೆ ಬಂದಿದ್ದಾರೆ. ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಕುಮಾರಸ್ವಾಮಿ, ಅಮಿತ್ ಶಾ, ನಡ್ಡಾ, ನಿಖಿಲ್ ಕುಮಾರಸ್ವಾಮಿ ಕುಪೇಂದ್ರ ರೆಡ್ಡಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಭಾಗವಹಿಸಿದ್ದರು. ಸಭೆಯಲ್ಲಿ ಏನೇನು ಚರ್ಚೆಯಾಯಿತು ಎಂಬ ಮಾಹಿತಿ ಇಲ್ಲಿದೆ.

ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೀಟು ಹಂಚಿಕೆ ಮಾಡುವುದು ಒಳಿತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರ ಜೊತೆ ಚರ್ಚಿಸಿ ಸೀಟು ಹಂಚಿಕೆ ಘೋಷಣೆ ಮಾಡುವುದು ಒಳ್ಳೆಯದು. ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆಯೂ ಅವರ ಜತೆ ಚರ್ಚಿಸಿದ ನಂತರ ಅಧಿಕೃತ ಘೋಷಣೆ ಮಾಡಿದರೆ ಉತ್ತಮ ಎಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಉಭಯ ಪಕ್ಷಗಳ ನಾಯಕರು ಅಭಿಪ್ರಾಯಪಟ್ಟರು.

ವಿಜಯದಶಮಿ ಹಬ್ಬದ ಬಳಿಕ ರಾಜ್ಯ ನಾಯಕರೊಂದಿಗೆ ಚರ್ಚಿಸೋಣ. ಮೈತ್ರಿ, ಸೀಟು ಹಂಚಿಕೆ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸುವುದು ಒಳ್ಳೆಯದು. ಸೀಟು ಹಂಚಿಕೆ ಬಗ್ಗೆ ಹಿರಿಯ ನಾಯಕರ ಅಭಿಪ್ರಾಯ ಅಗತ್ಯವಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಮನಸ್ಥಿತಿಯನ್ನು ಹೊಂದಿಸಬೇಕಿದೆ. ಲೋಕಸಭಾ ಚುನಾವಣೆಗೆ ಮತದಾರರ ಮನಸ್ಥಿತಿ ಹೊಂದಿಸಬೇಕಿದೆ. ಇದಕ್ಕೆ ನಾಯಕರು ಒಂದಷ್ಟು ಜಂಟಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕೆಳ ಮಟ್ಟದಲ್ಲಿ ಹೊಂದಾಣಿಕೆ ಆಗದಿದ್ದರೆ ಪ್ರಯತ್ನ ವ್ಯರ್ಥವಾಗಲಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸೋಣ ಎಂದು ಎರಡೂ ಪಕ್ಷಗಳ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.

ಈ ಮಧ್ಯೆ, ಆರು ಸ್ಥಾನಗಳಿಗೆ ಜೆಡಿಎಸ್​​ ಬೇಡಿಕೆ ಇಟ್ಟಿದೆ ಎಂದೂ ಹೇಳಲಾಗುತ್ತಿದೆ.

Leave a Reply

error: Content is protected !!