ಹಾಗಲಕಾಯಿ ಏಕೆ ಕಹಿ ಗುಣವನ್ನು ಹೊಂದಿರುತ್ತದೆ? ಅದರ ಆರೋಗ್ಯ ಪ್ರಯೋಜನಗಳೇನು? ಹಾಗಲಕಾಯಿ ಮೊದಲು ಕಂಡುಬಂದಿದ್ದು ಎಲ್ಲಿ?

ಶೇರ್ ಮಾಡಿ

ದೇಹವನ್ನು ಆರೋಗ್ಯಕರವಾಗಿಡಲು ಹಸಿರು ತರಕಾರಿಗಳನ್ನು ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅದರಲ್ಲಿ ಹಾಗಲಕಾಯಿಯು ಒಂದು. ಇದರಲ್ಲಿರುವ ಕಹಿ ಅಂಶದಿಂದಾಗಿ ಹೆಚ್ಚಿನವರು ಈ ತರಕಾರಿಯನ್ನು ಸೇವಿಸಲು ಇಷ್ಟಪಡುವುದಿಲ್ಲ. ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿದ್ದರೂ ಸಹ ಅದರಲ್ಲಿ ಅನೇಕಾರು ಆರೋಗ್ಯ ಪ್ರಯೋಜನಗಳು ಅಡಗಿವೆ. ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಸತು, ಕಬ್ಬಿಣ, ಪೊಟ್ಯಾಸಿಯಂ, ಫೋಲಿಕ್ ಆಮ್ಲ, ವಿಟಮಿನ್-ಬಿ, ಕ್ಯಾಲ್ಸಿಯಂ ಮುಂತಾದ ಅನೇಕ ಪೋಷಕಾಂಶಗಳು ಕಂಡುಬರುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಅದರಲ್ಲೂ ಮಧುಮೇಹ ರೋಗಿಗಳು ಹಾಗಲಕಾಯಿಯನ್ನು ತಿನ್ನಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇದರ ಕಹಿ ಗುಣದ ಕಾರಣದಿಂದಾಗಿ ಹೆಚ್ಚಿನವರು ಹಾಗಲಕಾಯಿಯನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಅಷ್ಟಕ್ಕೂ ಹಾಗಲಕಾಯಿ ಕಹಿ ಗುಣವನ್ನು ಏಕೆ ಹೊಂದಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಆ ಕುರಿತ ಮಾಹಿತಿ ಇಲ್ಲಿದೆ.

ಹಾಗಲಕಾಯಿ ವಿಪರೀತ ಕಹಿ ಅಂಶವನ್ನು ಹೊಂದಿರುವ ಹಿಂದಿನ ಕಾರಣ:
ಹಾಗಲಕಾಯಿಯು ವಿಷಕಾರಿಯಲ್ಲದ ಗ್ಲೈಕೋಸೈಡ್ ಮೊಮೊರ್ಡಿಸಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಈ ಸಂಯುಕ್ತ ಹಾಗಲಕಾಯಿಯಲ್ಲಿ ಕಹಿ ಅಂಶವನ್ನು ಉಂಟುಮಾಡುತ್ತದೆ. ಮಾತ್ರವಲ್ಲದೆ ಇದು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಲಕಾಯಿಯ ಕಹಿ ಅಂಶ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಹಾಗಲಕಾಯಿ ಮೊದಲು ಕಂಡುಬಂದಿದ್ದು ಎಲ್ಲಿ?
ಹೆಚ್ಚಿನವರು ಹಾಗಲಕಾಯಿ ಭಾರತ ಮೂಲದ ತರಕಾರಿ ಎಂದು ಭಾವಿಸುತ್ತಾರೆ. ಆದರೆ ಹಾಗಲಕಾಯಿ ಮೊದಲು ಕಂಡುಬಂದಿದ್ದು, ಆಫ್ರೀಕಾ ದೇಶದಲ್ಲಿ. ಹೌದು ಆಫ್ರೀಕಾದ ಶುಷ್ಕ ಋತುವಿನಲ್ಲಿ ಅಲ್ಲಿನ ಕುಂಗ್ ಎಂಬ ಬೇಟೆಗಾರ ಜನಾಂಗದವರಿಗೆ ಹಾಗಲಕಾಯಿ ಮುಖ್ಯ ಆಹಾರವಾಗಿತ್ತು. ಹೀಗೆ ಮೊದಲು ಆಫ್ರಿಕಾದಲ್ಲಿ ಹಾಗಲಕಾಯಿ ಕಂಡುಬಂದಿದ್ದು. ಕಾಲನಂತರದಲ್ಲಿ ಹಾಗಲಕಾಯಿ ಏಷ್ಯಾದಂತ ಹರಡಿತು. ಪ್ರಸ್ತುತ ಇದರ ಅದ್ಭುತ ಆರೋಗ್ಯ ಪ್ರಯೋಜನಗಳ ಕಾರಣದಿಂದಾಗಿಯೇ ಎಲ್ಲೆಡೆ ಹೆಸರುವಾಸಿಯಾಗಿದೆ.

ಹಾಗಲಕಾಯಿಯ ಆರೋಗ್ಯ ಪ್ರಯೋಜನಗಳು:

ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ:
ಹಾಗಲಕಾಯಿ ತನ್ನ ಅಸಾಧಾರಣ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಮಧುಮೇಹಿಗಳಿಗೆ ಹಾಗಲಕಾಯಿ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಹಾಗಲಕಾಯಿ ಹೆಚ್ಚು ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ:
ಪ್ರಸ್ತುತ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದೆ. ಹೀಗಿರುವಾಗ ಹೃದಯಸಂಬಂಧಿ ಕಾಯಿಲೆಗಳಿಂದ ಪರಿಹಾರ ಪಡೆಯಲು ಹಾಗಲಕಾಯಿಯ ಸೇವನೆ ಉತ್ತಮ. ಹೃದ್ರೋಗಿಗಳಿಗೂ ಹಾಗಲಕಾಯಿ ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ ಹೊಂದಿದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ನ್ನು ಮಟ್ಟವನ್ನು ಹಾಗೂ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:
ಇಂದಿನ ಬಿಡುವಿಲ್ಲದ ಜೀವನಶೈಲಿಯ ಕಾರಣ ಅನೇಕರು ಅನಾರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದಾಗಿ ಹೊಟ್ಟೆಯಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತದೆ. ಆಯುರ್ವೇದದ ಪ್ರಕಾರ ಹಾಗಲಕಾಯಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ. ಅಲ್ಲದೆ ಇದು ಮಲಬದ್ಧತೆ, ಅಜೀರ್ಣ ಮುಂತಾದ ಹೊಟ್ಟೆ ಸಂಬಂಧಿ ಸಮಸ್ಯೆಯನ್ನು ತೊಡೆದುಹಾಕುತ್ತದೆ ಹಾಗೂ ಕರುಳನ್ನು ಆರೋಗ್ಯಕರವಾಗಿಡುವಲ್ಲಿ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ:
ಹಾಗಲಕಾಯಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಪೋಷಕಾಂಶ ಇರುವುದರಿಂದ ವೈರಾಣು ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಮತ್ತು ಇದರಲ್ಲಿ ವಿಟಮಿನ್ ಎ ಪೋಷಕಾಂಶವಿದ್ದು ಇದು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಉತ್ತಮ:
ಹಾಗಲಕಾಯಿಯು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು, ಇದು ವಿಶೇಷವಾಗಿ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶವಿದ್ದು, ಇದನ್ನು ತಿನ್ನುವುದರಿಂದ ಬಹಳ ಸಮಸಯದವರೆಗೆ ಹೊಟ್ಟೆ ತುಂಬಿರುತ್ತದೆ.

Leave a Reply

error: Content is protected !!
%d