ತಾಯಿ ಮಗನನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ: ಆರೋಪಿಗಳ ಬಂಧನ

ಶೇರ್ ಮಾಡಿ

ಮೂರು ವಾರಗಳ ಹಿಂದೆ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯ ಗ್ರಾ.ಪಂ. ಮಾಜಿ ಸದಸ್ಯ ಗುರುಪ್ರಸಾದ್‌ ರೈ ಅವರ ಮನೆಗೆ ತಡರಾತ್ರಿ ದರೋಡೆಕೋರರು ನುಗ್ಗಿ ತಾಯಿ ಮತ್ತು ಮಗನನ್ನು ಕಟ್ಟಿ ಹಾಕಿ 8 ಪವನ್‌ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರು ಶುಕ್ರವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಟ್ಲ ಪೆರುವಾಯಿ ಕಿಣಿಯರ ಪಾಲುಮನೆಯ ಸುಧೀರ್‌ ಕುಮಾರ್‌ ಮಣಿಯಾಣಿ, ಮಂಜೇಶ್ವರ ಗ್ರಾಮದ ಅಟ್ಟಿಗೋಳಿಯ ಮಂಜಳ್ತೋಡಿ ನಿವಾಸಿ ಕಿರಣ್‌ ಟಿ., ಕಾಞಂಗಾಡಿನ ಕಂಡತ್ತೀಲ್‌ವೀಡು ನಿವಾಸಿ ಸನಾಲ್‌ ಕೆ.ವಿ., ಮಂಜೇಶ್ವರ ತಾಲೂಕಿನ ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ್‌ ಎಂ., ಎಡನಾಡು ಗ್ರಾಮದ ಸೀತಂಗೋಳಿ ರಾಜೀವಗಾಂಧಿ ಕಾಲನಿ ನಿವಾಸಿಗಳಾದ ಮಹಮ್ಮದ್‌ ಫೈಝಲ್‌, ಅಬ್ದುಲ್‌ ನಿಸಾರ್‌ ಬಂಧಿತ ಆರೋಪಿಗಳು.

ಪ್ರಕರಣದ ಪ್ರಮುಖ ಆರೋಪಿ ಕೇರಳದ ಇಚಿಲಂಕೋಡು ಕುಂಪಳದ ಪಚ್ಚಂಬಳ ನಿವಾಸಿ ರವಿ ಈಗಾಗಲೇ ಜೈಲಿನಲ್ಲಿದ್ದಾನೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು, ಕಬ್ಬಿಣದ ರಾಡ್‌, ತಲವಾರು, ಟಾರ್ಚ್‌ ಲೈಟ್‌ ಹಾಗೂ ಮೋಟಾರ್‌ ಸೈಕಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶುಕ್ರವಾರ ಘಟನ ಸ್ಥಳದಲ್ಲಿ ಮಹಜರು ನಡೆಸಲಾಗಿದೆ.

ಪೆರೋಲ್‌ನಲ್ಲಿ ಬಂದು ಕೃತ್ಯ ಎಸಗಿದ್ದ
ಈ ದರೋಡೆ ಕೃತ್ಯಕ್ಕೆ ಸಂಚು ರೂಪಿಸಿದ್ದ ರವಿ ಎಂಬಾತ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸಿದ್ದ ಪೆರ್ಲ ಜಬ್ಟಾರ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಒಳಪಟ್ಟು ಹಲವು ವರ್ಷಗಳಿಂದ ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿದ್ದ. ಈತ ಪೆರೋಲ್‌ ರಜೆಯಲ್ಲಿ ಬಂದು ಈ ಕೃತ್ಯಕ್ಕೆ ಸಂಚು ರೂಪಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿ ತನ್ನ ಪಾಡಿಗೆ ಆರಾಮವಾಗಿದ್ದ. ಕೆಲವು ದಿನಗಳಲ್ಲಿ ಈತನ ಪೆರೋಲ್‌ ರಜೆ ಮುಕ್ತಾಯಗೊಂಡು ಮರಳಿ ಜೈಲು ಸೇರಿದ್ದ. ಪ್ರಕರಣಕ್ಕೆ ಸಂಬಂಧಿಸಿ ಉಳಿದ ಆರೋಪಿಗಳು ಸೆರೆ ಸಿಕ್ಕ ವೇಳೆ ರವಿ ಪಾತ್ರ ಬಹಿರಂಗಗೊಂಡಿದೆ ಎನ್ನಲಾಗಿದೆ. ಈಗಾಗಲೇ ಈತನ ವಿರುದ್ಧ ಐದು ಪ್ರಕರಣ ಇದ್ದು, ಪೊಲೀಸರು ಈತನನ್ನು ಬಾಡಿ ವಾರೆಂಟ್‌ನಡಿ ವಶಕ್ಕೆ ಪಡೆಯಲಿದ್ದಾರೆ.

ದಾರಿ ತಿಳಿದವನೇ ದಾರಿ ತೋರಿಸಿದ್ದ
ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಪೆರುವಾಯಿ ಸುಧೀರ್‌ ಮಣಿಯಾಣಿ ವರ್ಷಗಳ ಹಿಂದೆ ವಾಹನವೊಂದರಲ್ಲಿ ಚಾಲಕನಾಗಿ ಗುರುಪ್ರಸಾದ್‌ ರೈ ಅವರ ಮನೆಗೆ ಬಂದಿದ್ದ. ದರೋಡೆಕೋರರ ಪರಿಚಯ ಇದ್ದ ಈತ ಅವರಿಗೆ ದಾರಿ ತೋರಿಸಿದ್ದ ಎನ್ನುವ ಮಾಹಿತಿ ತನಿಖೆಯ ವೇಳೆ ಬಹಿರಂಗಗೊಂಡಿದೆ. ಸೆ. 6ರಂದು ತಡರಾತ್ರಿ ಕುದ್ಕಾಡಿ ಮನೆಯಲ್ಲಿ ದರೋಡೆ ನಡೆದಿತ್ತು. ಕೃತ್ಯ ಎಸಗುವ ಮೊದಲ ದಿನ ರಾತ್ರಿ ತಂಡವೊಂದು ಗುರುಪ್ರಸಾದ್‌ ರೈ ಮನೆಯ ಬಳಿ ಬಂದು ಬಾಗಿಲು ಬಡಿದು ಹೋಗಿದ್ದು ಇದರಲ್ಲಿ ಸುಧೀರ್‌ ಇದ್ದ ಎನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿ
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಈಗಾಗಲೇ ನಾನಾ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ದರೋಡೆ ಕೃತ್ಯದ ಪ್ರಮುಖ ಆರೋಪಿ ರವಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದಾನೆ. ಸುಧೀರ್‌ ಮಣಿಯಾಣಿ ವಿರುದ್ಧ ವಿಟ್ಲ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ, ವಸಂತ ಬದಿಯಡ್ಕದ ಕುಂಬಳೆ ಠಾಣೆಯಲ್ಲಿ ನಾಲ್ಕು ಪ್ರಕರಣ, ಕಿರಣ್‌ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸುಲಿಗೆ, ಬರ್ಕೆ ಹಾಗೂ ಮಂಜೇಶ್ವರ ಠಾಣೆಯಲ್ಲಿ ಗಾಂಜಾ ಪ್ರಕರಣ, ಸನಾಲ್‌ ಕೆ.ವಿ. ವಿರುದ್ಧ ಕೇರಳ ರಾಜ್ಯದಲ್ಲಿ 15 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಪ್ರಕರಣದಲ್ಲಿ 9 ವರ್ಷ ಜೈಲು ಶಿಕ್ಷೆ ಪೂರೈಸಿ ಹೊರಗೆ ಬಂದಿದ್ದ. ಮಹಮ್ಮದ್‌ ಫೈಝಲ್‌ ವಿರುದ್ಧ ಬೆಟ್ಟಂಪಾಡಿ ಬಳಿ ವೃದ್ಧೆಯ ಚೈನು ಎಳೆದು ಸುಲಿಗೆ ಮಾಡಿದ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಾಗೂ ವಿಟ್ಲದ ಪೆಟ್ರೋಲ್‌ ಪಂಪಿನಲ್ಲಿ ಕಳವು ಹಾಗೂ ಮಂಜೇಶ್ವರ, ಕುಂಬಳೆ ಠಾಣೆಯಲ್ಲಿ ಕಳವು ಪ್ರಕರಣದಲ್ಲಿ ಕೇಸು ದಾಖಲಾಗಿದೆ. ನಿಸಾರ್‌ ವಿರುದ್ಧ ಬೆಟ್ಟಂಪಾಡಿಯಲ್ಲಿ ಚೈನ್‌ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಲ್ಲಿ ಪರಿಚಯ
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು ನಾಲ್ಕು ವಿಶೇಷ ತಂಡ ರಚಿಸಿದ್ದರು. ಸೆ. 28ರಂದು ಮೂವರು ಆರೋಪಿಗಳಾದ ಕಿರಣ್‌, ಸುಧೀರ್‌, ಸನಾಲ್‌ನನ್ನು ನಿಡ³ಳ್ಳಿಯಲ್ಲಿ ಬಂಧಿಸಲಾಗಿದ್ದು, ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಉಳಿದ ಆರೋಪಿಗಳನ್ನು ಸೆ. 29ರಂದು ಬೆಳಗ್ಗೆ ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಜೈಲಿನಲ್ಲೇ ಪರಿಚಯಗೊಂಡಿದ್ದರು ಎನ್ನುವ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳು ಯಾರಿಗೂ ಅನುಮಾನ ಬಾರದ ಹಾಗೆ ತಂತ್ರಗಾರಿಕೆ ರೂಪಿಸಿ ಕೃತ್ಯ ಎಸಗಿದ್ದರು ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್‌ ತಿಳಿಸಿದ್ದಾರೆ.

ನಗದು ಬಹುಮಾನ ಘೋಷಣೆ
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕಾರ್ಯಾಚರಣೆ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ನಗದು ಬಹುಮಾನ ಘೋಷಿದರು. ಬಳಿಕ ಗ್ರಾಮಾಂತರ ಠಾಣಾ ಎಸ್‌ಐ ಅವರಿಗೆ ನಗದು ಬಹುಮಾನ ಹಸ್ತಾಂತರಿಸಿದರು.ಎಸ್‌ಪಿ ಸಿ.ಬಿ. ರಿಷ್ಯಂತ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಧರ್ಮಪ್ಪ ಎನ್‌.ಎಂ. ಅವರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಉಪಾಧೀಕ್ಷಕಿ ಡಾ| ಗಾನಾ ಪಿ.ಕುಮಾರ್‌ ಅವರ ಮೂಲಕ ವಿಶೇಷ ಪತ್ತೆ ತಂಡ ರಚಿಸಲಾಗಿತ್ತು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ನೇತೃತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಉದಯರವಿ ಎಂ.ವೈ., ಗ್ರಾಮಾಂತರ ಠಾಣಾ ಪಿಎಸ್‌ಐ ಧನಂಜಯ ಬಿ.ಸಿ., ಉಪ್ಪಿನಂಗಡಿ ಠಾಣಾ ಪಿಎಸ್‌ಐ ರುಕ್ಮ ನಾಯ್ಕ, ಹೆಡ್‌ ಕಾನ್ಸ್‌ಟೆಬಲ್‌ಗ‌ಳಾದ ಹರೀಶ್ಚಂದ್ರ, ವೇಣೂರು ಠಾಣೆಯ ಪ್ರವೀಣ್‌ ಮೂರುಗೋಳಿ, ವಿಟ್ಲ ಠಾಣೆಯ ಉದಯ ರೈ, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಅಬ್ದುಲ್‌ ಸಲೀಂ, ಜಗದೀಶ್‌ ಅತ್ತಾಜೆ, ಹರೀಶ್‌, ಗ್ರಾಮಾಂತರ ಠಾಣೆಯ ಎಎಸ್‌ಐ ಮುರುಗೇಶ್‌, ಹೆಡ್‌ ಕಾನ್ಸ್‌ಟೆಬಲ್‌ಗ‌ಳಾದ ಪ್ರವೀಣ್‌ ರೈ ಪಾಲ್ತಾಡಿ, ಅದ್ರಾಮ್‌, ಬಾಲಕೃಷ್ಣ, ಹರೀಶ್‌, ಪ್ರಶಾಂತ್‌, ಮುನಿಯ ನಾಯ್ಕ, ಪುತ್ತೂರು ಸಂಚಾರ ಠಾಣೆಯ ಪ್ರಶಾಂತ್‌ ರೈ, ವಿನಾಯಕ ಎಸ್‌. ಬಾರ್ಕಿ, ಶರಣಪ್ಪ ಪಾಟೀಲ್‌, ಸಂಪತ್‌ ಕುಮಾರ್‌, ದಿವಾಕರ್‌, ವಾಹನ ಚಾಲಕ ಪ್ರವೀಣ್‌ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಗಡಿಗಳಲ್ಲಿ ಸಿಸಿ ಕೆಮರಾ
ಕೇರಳ ಗಡಿಭಾಗದಿಂದಲೇ ಅಪರಾಧ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಸಿಸಿ ಕೆಮೆರಾ ಅಳವಡಿಕೆ ಸೇರಿದಂತೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಎಸ್ಪಿ ಸಿ.ಬಿ. ರಿಷ್ಯಂತ್‌ ತಿಳಿಸಿದ್ದಾರೆ.

Leave a Reply

error: Content is protected !!