ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ನಿಡ್ಲೆ ಮತ್ತು ಕರಿಮಣೇಲು ಗ್ರಾಮದಲ್ಲಿ ನಿರ್ವಹಿಸಿದ್ದ ಕಾಮಗಾರಿಯ ಮೆಟಿರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು ಲೋಕೋಪಯೋಗಿ ಇಲಾಖೆಯ ಕ್ಲಾಸ್ 2 ದರ್ಜೆಯ ಗುತ್ತಿಗೆದಾರ ಪ್ರಭಾಕರ ನಾಯ್ಕರವರಿಂದ 20 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ರೊನಾಲ್ಡ್ ಲೋಬೋರವರು ಮಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಅ.18ರಂದು ನಡೆದಿದೆ.
ಲೋಕೋಪಯೋಗಿ ಇಲಾಖೆಯ ಕ್ಲಾಸ್ 2 ದರ್ಜೆಯ ಗುತ್ರಿಗೆದಾರ ಪ್ರಭಾಕರ ನಾಯ್ಕ ರವರು ಲೋಕೋಪಯೋಗಿ ಇಲಾಖೆಯಡಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾಗಿರಿಸಿದ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಮಲಂಪಯ್ಯ ಪರಿಶಿಷ್ಟ ಪಂಗಡದ ಕಾಲೋನಿಯ ಎಎನ್‌ಎಂ ರಸ್ತೆ ಕಾಮಗಾರಿಯನ್ನು 25 ಲಕ್ಷ ರೂ ಮೊತ್ತ ಹಾಗೂ ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಕೈರೋಳಿ ಎಂಬಲ್ಲಿನ ಪರಿಶಿಷ್ಟ ಜಾತಿ ಕಾಲೊನಿಯ ರಸ್ತೆ ಕಾಮಗಾರಿಯ 20 ಲಕ್ಷ ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಬಿಡ್ ಸಲ್ಲಿಸಿದ್ದ ಪ್ರಭಾಕರ ನಾಯ್ಕರವರು ಕಾಮಗಾರಿ ಪೂರ್ಣಗೊಳಿಸಿದ್ದರು. ಕಾಮಗಾರಿ ಮುಗಿದ ಬಳಿಕ ಸೈಟ್‌ನ ಮೆಟೀರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು ಮಂಗಳೂರು ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗಕ್ಕೆ ಪ್ರಭಾಕರ ನಾಯ್ಕರವರ ಕಡತ ತಲುಪಿತ್ತು. ಪ್ರಭಾಕರ ನಾಯ್ಕರವರು ಅ.11ರಂದು ಲೋಕೋಪಯೋಗಿ ಇಲಾಖೆಯ ಮಂಗಳೂರು ಕಚೇರಿಗೆ ಹೋಗಿ ಕಿರಿಯ ಇಂಜಿನಿಯರ್ ರೊನಾಲ್ಡ್ ಲೋಬೋರವರಲ್ಲಿ ಮಾತನಾಡಿದಾಗ ಅವರು ಫೈಲ್ ಬಂದಿರುವುದಾಗಿ ತಿಳಿಸಿದ್ದರಲ್ಲದೆ ಅಮೌಂಟ್ ಕೊಟ್ಟು ಹೋಗಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಕೊಟ್ಟು ಕೆಲಸ ಮಾಡಲು ಇಷ್ಟ ಇಲ್ಲದ ಪ್ರಭಾಕರ ನಾಯ್ಕರವರು ವಾಪಸ್ ಬಂದಿದ್ದರು. ಅ.೧೬ರಂದು ಮಂಗಳೂರು ಬೊಂದೇಲ್‌ನಲ್ಲಿರುವ ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗದ ಕಚೇರಿಗೆ ಹೋಗಿ ಕಿರಿಯ ಇಂಜಿನಿಯರ್ ರೊನಾಲ್ಡ್ ಲೋಬೋರವರಲ್ಲಿ ಪ್ರಭಾಕರ ನಾಯ್ಕರವರು ಮತ್ತೆ ಮಾತನಾಡಿದ್ದರು. ಕಡತದಲ್ಲಿ ನಮೂದಿಸಿದಂತೆ ಮೆಟೀರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು 22 ಸಾವಿರ ರೂ ಲಂಚ ನೀಡಬೇಕು ಎಂದು ರೊನಾಲ್ಡ್ ಲೋಬೋ ಈ ವೇಳೆ ಬೇಡಿಕೆ ಇಟ್ಟಿದ್ದರು. ಸ್ವಲ್ಪ ಕಮ್ಮಿ ಮಾಡಿ ಎಂದು ಪ್ರಭಾಕರ ನಾಯ್ಕರವರು ಹೇಳಿದಾಗ 20 ಸಾವಿರ ರೂ ಕೊಡಿ ಎಂದು ರೊನಾಲ್ಡ್ ಲೋಬೋ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಪ್ರಭಾಕರ ನಾಯ್ಕರವರು ಅ.14ರಂದು ಮಂಗಳೂರು ಬೊಂದೇಲ್‌ನಲ್ಲಿರುವ ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗದ ಕಿರಿಯ ಇಂಜಿನಿಯರ್ ರೊನಾಲ್ಡ್ ಲೋಬೋರವರಿಗೆ 20 ಸಾವಿರ ರೂ ಲಂಚದ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೊನಾಲ್ಡ್ ಲೋಬೋರವರನ್ನು ಬಂಧಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತದ ದ.ಕ. ಪೊಲೀಸ್ ಅಧೀಕ್ಷಕರಾದ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾದ ಸಿ.ಎ. ಸೈಮನ್‌ರವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಕಲಾವತಿ.ಕೆ, ಚಲುವರಾಜು ಬಿ, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ ಮತ್ತು ಸುರೇಶ್ ಕುಮಾರ್ ಪಿ.ರವರು ಕಾರ್ಯಾಚರಣೆ ನಡೆಸಿದ್ದರು.