ಬಾಲಿವುಡ್ ಖ್ಯಾತ ನಟಿ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ದೂರವಾಗಿದ್ದಾರಾ? ಇಂಥದ್ದೊಂದು ಅನುಮಾನ ಹುಟ್ಟು ಹಾಕಿದೆ ರಾಜ್ ಕುಂದ್ರಾ ಮಾಡಿರುವ ಎಕ್ಸ್ (ಟ್ವೀಟ್). ಕಷ್ಟದ ದಿನಗಳಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿಯಿಂದ ರಾಜ್ ಕುಂದ್ರಾ ದೂರವಾದರಾ? ನಂಬುವುದಕ್ಕೆ ಅಸಾಧ್ಯ. ಆದರೆ, ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ‘ನಾವು ಬೇರ್ಪಟ್ಟಿದ್ದೇವೆ. ಕಷ್ಟದ ಈ ಸಮಯದಲ್ಲಿ ನೀವು ನಮಗಷ್ಟು ಸಮಯ ಕೊಡಿ’ ಎಂದು ಬರೆದುಕೊಂಡಿದ್ದಾರೆ.
We have separated and kindly request you to give us time during this difficult period 🙏💔
— Raj Kundra (@onlyrajkundra) October 19, 2023
ಮೊನ್ನೆಯಷ್ಟೇ ನಡೆದ ಯುಟಿ 69 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪತ್ನಿ ಜೊತೆ ಭಾಗಿಯಾಗಿದ್ದರು ರಾಜ್ ಕುಂದ್ರಾ. ಅಲ್ಲದೇ ಗಣೇಶೋತ್ಸವ ವೇಳೆ ಮನೆಯಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಜೊತೆಯೇ ಡಾನ್ಸ್ ಮಾಡಿ ಸಂಭ್ರಮಿಸಿದ್ದರು. ಅದ್ದೂರಿಯಾಗಿ ಗಣಪತಿ ಹಬ್ಬವನ್ನು ಆಚರಿಸಲಾಗಿತ್ತು. ಆದರೆ, ಇದೀಗ ದಿಢೀರ್ ಅಂತ ಇಂಥದ್ದೊಂದು ಪೋಸ್ಟ್ ಮಾಡಿದ್ದಾರೆ. ಇದು ಡಿವೋರ್ಸ್ ಕುರಿತಾದದ್ದಾ? ಅಥವಾ ಬೇರೆ ಏನಾದರೂ ಇರಬಹುದಾ? ಅವರೇ ಸ್ಪಷ್ಟನೆ ಕೊಡಬೇಕಿದೆ.
ನಿನ್ನೆಯಷ್ಟೇ ಮುಖ ತೋರಿಸಿದ್ದ ರಾಜ್ ಕುಂದ್ರಾ
ಸತತ ಎರಡು ವರ್ಷಗಳಿಗೂ ಹೆಚ್ಚು ಕಾಲ ನಟಿ ಶಿಲ್ಪಾ ಶೆಟ್ಟಿ ಪತಿ, ನಿರ್ಮಾಪಕ ರಾಜ್ ಕುಂದ್ರ ಫೇಸ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರು. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದ ನಂತರ ಅವರು ಸಾರ್ವಜನಿಕವಾಗಿ ಯಾವತ್ತೂ ಮುಖ ತೋರಿಸಿರಲಿಲ್ಲ. ಸದಾ ಫೇಸ್ ಮಾಸ್ಕ್ ಹಾಕಿಕೊಂಡೇ ಮನೆಯಾಚೆ ಕಾಲಿಡುತ್ತಿದ್ದರು. ನಿನ್ನೆಯಷ್ಟೇ ಅವರು ತಮ್ಮ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.
ಅವರದ್ದೇ ನಿರ್ಮಾಣದಲ್ಲಿ ಮೂಡಿ ಬಂದಿರುವ ಯುಟಿ 69 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲ ಬಾರಿಗೆ ಮುಖ ತೋರಿಸಿದ್ದಾರೆ. ಕಾರ್ಯಕ್ರಮಕ್ಕೆ ಫೇಸ್ ಮಾಸ್ಕ್ ಹಾಕಿಕೊಂಡು ಬಂದಿದ್ದರೂ, ಆನಂತರ ಅದನ್ನು ಕಳಚಿಟ್ಟರು. ತಮ್ಮ ನೋವಿನ ದಿನಗಳನ್ನು ಭಾವುಕರಾಗಿಯೇ ಹಂಚಿಕೊಂಡರು.
ಅಶ್ಲೀಲ ಚಿತ್ರ ನಿರ್ಮಾಣದ ವಿಚಾರವಾಗಿ ಜೈಲಿಗೂ ಹೋಗಿ ಬಂದಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಜೈಲಿನಿಂದ ಆಚೆ ಬಂದ ಮೇಲೆ ಫೇಸ್ ಮಾಸ್ಕ್ ಹಾಕಿಕೊಂಡೇ ಓಡಾಡುತ್ತಿದ್ದರು. ಮನೆಯಿಂದ ಆಚೆ ಬಂದರೆ, ಅವರು ಫೇಸ್ ಮಾಸ್ಕ್ ಸಮೇತ ಬರುತ್ತಿದ್ದರು. ಆದಷ್ಟು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷದಿಂದ ಅವರು ಹಾಗೆಯೇ ಮಾಡುತ್ತಾ ಬಂದಿದ್ದಾರೆ.
ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿದ್ದವು. ಮುಖಮುಚ್ಚಿಕೊಂಡು ಓಡಾಡುವಂತಹ ಕೆಲಸ ಮಾಡಿದ್ದೀರಿ. ತಪ್ಪು ತಿದ್ದಿಕೊಂಡು ಚೆನ್ನಾಗಿ ಮುಖ ತೋರಿಸಿ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ ಕುಂದ್ರಾ ಟ್ರೋಲ್ ಮಾಡುವವರನ್ನು ನಿಂದಿಸಿದ್ದರು.
ನೀವು ಫೇಮಸ್ ಅನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ. ನೀವು ಯಾರಿಗೂ ಗೊತ್ತೇ ಇಲ್ಲ ಅಂತಿದ್ದರೆ ಟ್ರೋಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ರಾಜ್ ಕುಂದ್ರಾ, ‘ನಾನು ಶಿಲ್ಪಾ ಶೆಟ್ಟಿ ಪತಿ ಅನ್ನುವುದೇ ನನಗೆ ನೆಗೆಟಿವ್ ಆಗಿದೆ. ಅವರಿಂದಾಗಿ ನಾನು ಮರ್ಯಾದೆ ಕಳೆದುಕೊಂಡೆ’ ಎಂದು ಪತಿಯ ಪಾಪ್ಯುಲಾರಿಟಿ ತಮಗೆ ಮುಳುವಾದ ಬಗ್ಗೆ ಉತ್ತರಿಸಿದ್ದರು. ಇದೀಗ ಎಲ್ಲದಕ್ಕೂ ಸುಖಾಂತ್ಯ ಹಾಡಿದ್ದಾರೆ.