ಹುಲಿ ಉಗುರಿನ ಪೆಂಡೆಂಟ್ ಬಳಸಿರುವ ವಿಚಾರಕ್ಕೆ ಸಂಬಂಧಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಅಳಿಯ, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪೆಂಡೆಂಟ್ ಮಾದರಿಯ ಸರ ವಶಪಡಿಸಿಕೊಂಡರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ನೇತೃತ್ವದಲ್ಲಿ 10-12 ಜನರ ತಂಡ ಭೇಟಿ ನೀಡಿ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಸರ ಜಪ್ತಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್, ರಜತ್ ಉಳ್ಳಾಗಡ್ಡಿಮಠ ಅವರ ಬಳಿ ಇರುವ ಪೆಂಡೆಂಟ್ ಮಾದರಿ ಸರ ಪರಿಶೀಲನೆ ಮಾಡಿದ್ದೇವೆ. ಈಗಾಗಲೇ ಆ ಪೆಂಡೆಂಟ್ ವಶಕ್ಕೆ ಪಡೆದಿದ್ದು, ಅದರ ವಾಸ್ತವತೆ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಹಿಸಲಾಗುವುದು. ಅಲ್ಲಿಂದ ಪರೀಕ್ಷೆ ನಡೆದು ವರದಿ ಬರಲು ಕನಿಷ್ಠ ಒಂದು ತಿಂಗಳವಾಗುತ್ತದೆ. ಒಂದು ವೇಳೆ ಅದು ನಿಜವಾದ ಹುಲಿ ಉಗುರಾದಲ್ಲಿ ಸೂಕ್ತ ಕ್ರಮ ಎಂದರು.
ಈ ಕುರಿತು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಾತನಾಡಿ, ನನ್ನ ಮದುವೆ ಸಮಯದಲ್ಲಿ ನಾನು ಧರಿಸಿದ್ದ ಒಂದು ಪೆಂಡೆಂಟ್ ನಿಜವಾದ ಹುಲಿ ಉಗುರಿನಿಂದ ಮಾಡಿದ್ದಲ್ಲ. ಅದು ಫೈಬರ್ ಮಿಶ್ರಿತ ವಸ್ತುವಿನಿಂದ ಮಾಡಿದ್ದಾಗಿದೆ. ನಾನು ಮೂಲತಃ ಒಬ್ಬ ಗಾಂಧೀವಾದಿ, ಅಹಿಂಸಾವಾದಿ. ಹೀಗಿರುವಾಗ ಒಂದು ಪ್ರಾಣಿ ಹಿಂಸಿಸಿ ಶೋಕಿ ಮಾಡುವ ಅವಶ್ಯಕತೆ ಇಲ್ಲ. ತನಿಖೆಗೆ ಸಂಪೂರ್ಣ ಸಹಕರಿಸುವೆ ಎಂದರು.
ರಜತ್ ಉಳ್ಳಾಗಡ್ಡಿ ಮಠ ಅವರು ಮದುವೆ ಸಮಯದಲ್ಲಿ ಹುಲಿ ಪೆಂಡೆಂಟ್ ಮಾದರಿಯ ಸರ ಧರಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದ್ದವು. ಈ ಹಿನ್ನೆಲೆ ಶುಕ್ರವಾರ ಅರಣ್ಯ ಇಲಾಖೆಯ 10-12 ಜನರ ತಂಡ ಅವರ ಇಲ್ಲಿನ ದುರ್ಗದ ಬಯಲು ಬಳಿಯ ಉಳ್ಳಾಗಡ್ಡಿಮಠ ಓಣಿ ನಿವಾಸಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ, ಪೆಂಡೆಂಟ್ ವಶಪಡಿಸಿ ಕೊಂಡಿದ್ದಾರೆ.