ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸಚಿನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷೀಯ ನುಡಿಗಳಲ್ಲಿ ಕನ್ನಡ ಭಾಷೆಯ ಐತಿಹಾಸಿಕ ಹಿನ್ನೆಲೆಯ ಕುರಿತು ಇಂದಿನ ಯುವ ಸಮುದಾಯ ವಿಸ್ಮೃತಿಗೆ ಒಳಗಾಗಬಾರದು ಎಂದರು. ಕನ್ನಡದ ಅಕ್ಷರಗಳ ಪ್ರತಿಯೊಂದು ಧ್ವನಿಯ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಕನ್ನಡದ ಮಹತ್ವದ ಕುರಿತು ತಿಳಿಸಿದರು. ನಮ್ಮ ಬದುಕಿನ ಅಸ್ತಿತ್ವವು ಭಾಷೆಯ ಅಸ್ತಿತ್ವದೊಂದಿಗೆ ಬೆಸೆದುಕೊಂಡಿರುವ ಕಾರಣ ಕನ್ನಡದ ಕಲೆ, ಸಾಹಿತ್ಯ, ಮುಂತಾದ ವಿಷಯಗಳ ಬೆಳವಣಿಗೆಗಳ ಭಾಗವಾಗಿ ಕನ್ನಡದ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ವೆರೊನಿಕಾ ಪ್ರಭಾ ಅವರು ಮಾತನಾಡುತ್ತಾ ಮೂಲತಃ ಮಲಯಾಳಂ ಮಾತೃಭಾಷೆಯ ಹಿನ್ನಲೆಯಿಂದ ಬೆಳೆದು ಬಂದರೂ ಕೂಡ ಕಳೆದ ಏಳೆಂಟು ವರ್ಷಗಳಲ್ಲಿ ಕನ್ನಡ ಓದು-ಬರವಣಿಗೆಯನ್ನು ಕಲಿತುಕೊಂಡು ಪ್ರಸ್ತುತ ಕನ್ನಡತಿಯೂ ಆಗಿ ರೂಪುಗೊಂಡ ಬಗೆಯನ್ನು ಸ್ವಾರಸ್ಯಪೂರ್ಣವಾಗಿ ಹಂಚಿಕೊಂಡರು. ಇಂತಹ ಸಮೃದ್ಧವಾದ ಸುಂದರ ಭಾಷೆಯ ಬದುಕನ್ನು ನನ್ನದಾಗಿಸಿಕೊಂಡಿದ್ದಕ್ಕೆ ಹೆಮ್ಮೆಯಿದೆ ಎಂದರು.
ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಯೋಜಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನೂರಂದಪ್ಪ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕರ್ನಾಟಕ ಎಂದು ನಾಮಕರಣ ಮಾಡಿದ 50ನೆ ವರ್ಷದ ಸಂಭ್ರಮಾಚರಣೆಯು ಈ ವರ್ಷದ ವಿಶೇಷತೆಯಾಗಿದ್ದು ರಾಜ್ಯ ಸರಕಾರದ ಆಶಯದಂತೆ “ಕರ್ನಾಟಕ ಸಂಭ್ರಮ 50″ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದ ಭಾಗವಾಗಿ ಆಚರಿಸುತ್ತಿರುವ ಮಹತ್ವವನ್ನು ಪ್ರಸ್ತಾಪಿಸಿದರು.
ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿನಿಯರಾದ ಮಧುಶ್ರೀ, ಭಾರತಿ, ಅನನ್ಯ, ಶಿಲ್ಪಾ, ಯಕ್ಷಿತಾ, ಕಾವ್ಯ, ಹಾಗೂ ವಿದ್ಯಾರ್ಥಿಗಳಾದ ಅಮೀರ್, ಮನೋರಾಜ್ ಅವರು ನುಡಿ ನಮನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.