ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬೆಳಗ್ಗೆ ವೇಳೆ ಪೊಲೀಸ್ ಡ್ಯೂಟಿ ಮಾಡೋದು, ರಾತ್ರಿಯಾಗುತ್ತಿದ್ದಂತೆ ಕಳ್ಳತನದ ಡ್ಯೂಟಿ ಮಾಡುತ್ತಿದ್ದ ಮುಖ್ಯಪೇದೆಯನ್ನು ಬಂಧಿಸಿ, ಜೈಲಿಗೆ ಅಟ್ಟಲಾಗಿದೆ. ಪೊಲೀಸಪ್ಪನೇ ಕಳ್ಳತನಕ್ಕೆ ಇಳಿಯೋದೂ ಅಲ್ಲದೆ; ಎಂಓಬಿ ಅಪರಾಧಿಯೊಬ್ಬನನ್ನು ಕೂಡ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಈ ಘನಂಧಾರಿ ಪೊಲೀಸಪ್ಪ ಎಂಬುದು ಮತ್ತಷ್ಟು ಬೇಸರದ ಸಂಗತಿ.
ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಮುಖ್ಯಪೇದೆ ಸಿದ್ದರಾಮರೆಡ್ಡಿ ಬಂಧಿತ ಆರೋಪಿ.
ಸಾಬಣ್ಣ ಎಂಬ ಎಂ.ಓ.ಬಿ. ಅಪರಾಧಿಯೊಬ್ಬನನ್ನು ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಸಿದ್ದರಾಮರೆಡ್ಡಿ. ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರೇ ಈತನ ಟಾರ್ಗೆಟ್. ನಗದು ಹಣ ಮತ್ತು ಚಿನ್ನಾಭರಣಗಳನ್ನ ಮಾತ್ರ ಈ ಪೊಲೀಸ್ ಖದೀಮ ಜೋಡಿ ಕದಿಯುತ್ತಿತ್ತು.
ಮಧ್ಯರಾತ್ರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೇ ಇವರ ಟಾರ್ಗೆಟ್ ಆಗಿದ್ದರು. ದಂಡು ರೈಲು ನಿಲ್ದಾಣ ಬೈಯಪ್ಪನಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರು ತಮ್ಮ ಕೈಚಳಕ ತೋರಿದ್ದಾರೆ. ಆರೋಪಿ ಸಿದ್ದರಾಮರೆಡ್ಡಿಯನ್ನು ಇಲಾಖೆ ಸೇವೆಯಿಂದ ಅಮಾನತು ಮಾಡಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.