ಮುಜರಾಯಿ ಇಲಾಖೆಯಲ್ಲಿ ಅತಿ ಹೆಚ್ಚು ಆದಾಯವಿರುವ ದೇವಸ್ಥಾನ ಎಂಬ ಹಿರಿಮೆಗೆ ಪಾತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಕೆಗೆಂದು ಖರೀದಿಸಲಾದ ಇನ್ನೋವಾ ಕ್ರಿಸ್ಟಾ ಕಾರು ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿ ಓಡಾಡುತ್ತಿದೆ. ಆದರೆ ವಾಹನ ನಿರ್ವಾಹಣಾ ವೆಚ್ಚವನ್ನು ದೇವಳದ ಖಾತೆಯಿಂದಲೇ ಭರಿಸಲಾಗುತ್ತಿದೆ!
2019ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಶ-ವಿದೇಶದಿಂದ ಗಣ್ಯರು, ಹಿರಿಯ ಅಧಿಕಾರಿಗಳು ಬರುತ್ತಿರುತ್ತಾರೆ ಆ ಕಾರಣ, ತುರ್ತು ಉಪಯೋಗಕ್ಕೆಂದು ಇನ್ನೋವಾ ಕಾರನ್ನು ಖರೀದಿಸಲಾಗಿತ್ತು. ಈ ವಾಹನವನ್ನು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಕೆ ಮಾಡುತ್ತಿದ್ದರು.
ಆದರೆ, ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಈ ಕಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ಸರಕಾರದ ಮಟ್ಟದಲ್ಲಿ ನಡೆಯುವ ಸಭೆಗಳು, ನ್ಯಾಯಾಲಯವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಹಾಜರಾಗಲು ಅನುಕೂಲವಾಗುವಂತೆ ತಾತ್ಕಾಲಿಕವಾಗಿ ವಾಹನವನ್ನು ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಸೂಚನೆ ಬಂದಿತ್ತು. ಕೂಡಲೇ ಕಳಿಸಿಕೊಡದಿದ್ದರೆ ಕ್ರಮ ಜರುಗಿಸುತ್ತೇವೆ ಎಂದು 2019ರ ಡಿಸೆಂಬರ್ 12ರಂದು ಇಲಾಖೆ ಆಯುಕ್ತರು ಬೆದರಿಸಿದ್ದರು. ಇದಕ್ಕೆ ಹೆದರಿದ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳು ಮರುದಿನವೇ ಆ ವಾಹನವನ್ನು ಬೆಂಗಳೂರಿಗೆ ಕಳಿಸಿಕೊಟ್ಟಿದ್ದರು.
ಕುತೂಹಲಕಾರಿ ವಿಚಾರ ಇಲ್ಲಿಂದಲೇ ಶುರುವಾಗುತ್ತೆ. ದೇವಸ್ಥಾನದವರು ಕೊಟ್ಟ ಕಾರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಓಡಾಡುತ್ತಿದ್ದರೂ, ಪ್ರತಿವರ್ಷ ಇನ್ಶೂರೆನ್ಸ್ ಮೊತ್ತ, ಸಿಗ್ನಲ್ ಜಂಪ್ ಸೇರಿದಂತೆ ಮೋಟಾರು ವಾಹನ ನಿಯಮಗಳ ಉಲ್ಲಂಘನೆಗೆ ನೀಡಲಾಗುವ ಎಲ್ಲಾ ನೋಟಿಸ್ ಗಳು ದೇವಸ್ಥಾನಕ್ಕೆ ಬರುತ್ತಿದೆ! ಹಲವು ಬಾರಿ ದಂಡದ ಮೊತ್ತವನ್ನು ದೇವಳ ಖಾತೆಯಿಂದ ಸಂದಾಯ ಮಾಡಲಾಗಿದೆ. ವಾಹನ ಬೆಂಗಳೂರಿಗೆ ಹೋದ ಬಳಿಕ 2 ತಿಂಗಳಿಗೊಮ್ಮೆ 50 ಸಾವಿರ ರೂ.ವನ್ನು ನಿರ್ವಹಣೆ ಹಾಗೂ ಇತರ ಖರ್ಚು ಎಂದು ದೇವಸ್ಥಾನದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಮಾಡೋ ರೀತಿ ಬೆಂಗಳೂರಿನ ಅಧಿಕಾರಿಗಳು ನಾಲ್ಕು ವರ್ಷಗಳಿಂದ ದೇವಸ್ಥಾನದ ದುಡ್ಡಲ್ಲಿ ಕಾರನ್ನು ಓಡಿಸುತ್ತ ಮೆರೆದಾಡಿದ್ದಾರೆ.