ಹಿಂದಕ್ಕೆ ಚಲಿಸಿದ ಲಾರಿ; ನಾಲ್ಕು ಕಾರು, ಒಂದು ಬೈಕ್‌ಗೆ ಹಾನಿ

ಶೇರ್ ಮಾಡಿ

ಸುರತ್ಕಲ್‌: ಇಲ್ಲಿನ ಪೆಟ್ರೋಲ್‌ ಬಂಕ್‌ ರಸ್ತೆ ಬಳಿ ನಿಲ್ಲಿಸಿದ್ದ ಸಿಮೆಂಟ್‌ ತುಂಬಿದ ಲಾರಿಯೊಂದು ಆಕಸ್ಮಿಕವಾಗಿ ಹಿಂದಕ್ಕೆ ಚಲಿಸಿ ನಿಲ್ಲಿಸಿದ್ದ ನಾಲ್ಕು ಕಾರು, ಒಂದು ಬೈಕ್‌ಗೆ ಗುದ್ದಿ ಹಾನಿ ಮಾಡಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸಂಜೆ ಐದೂವರೆ ವೇಳೆ ಈ ಘಟನೆ ಸಂಭವಿಸಿದ್ದು, ಚಾಲಕ ಲಾರಿಯನ್ನು ನಿಲ್ಲಿಸಿ ಹೊರಗೆ ತೆರಳಿದ್ದ . ಏಕಾಏಕಿ ಹಿಂದಕ್ಕೆ ಚಲಿಸಿದ ಲೋಡ್‌ ಲಾರಿ ಇಲ್ಲಿನ ಡಿವೈಡರ್‌ ಬಳಿ ತಿರುವು ತೆಗೆದುಕೊಂಡು ಬಂದಿದೆ. ಇದರಿಂದ ಮಾರ್ಕೆಟ್‌ ಅಂಗಡಿಗೆ ಬಂದಿದ್ದ ಗ್ರಾಹಕರ ನಾಲ್ಕು ಕಾರುಗಳಿಗೆ ಗುದ್ದಿತಲ್ಲದೆ ಎಳೆದುಕೊಂಡು ಮತ್ತಷ್ಟು ಚಲಿಸಿ, ಬಳಿಕ ಅಂಗಡಿಯ ಗೋಡೆಗೆ ತಾಗಿ ನಿಂತಿತು.

ನೇರವಾಗಿ ಚಲಿಸಿದ್ದರೆ ಸಮೀಪದ ಬಸ್‌ ತಂಗುದಾಣದಲ್ಲಿದ್ದ ಬಸ್‌, ಪ್ರಯಾಣಿಕರಿಗೆ ಢಿಕ್ಕಿ ಹೊಡೆಯುವ ಸಂಭವವಿತ್ತು.ಇತ್ತ ಮಾರ್ಕೆಟ್‌ ಬಳಿಯೂ ಸಾಕಷ್ಟು ಜನವಿದ್ದು, ದೂರದಿಂದಲೇ ಲಾರಿ ಹಿಮ್ಮುಖವಾಗಿ ಚಲಿಸುವುದನ್ನು ಕಂಡು ಬದಿಗೆ ಸರಿದು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರು ಉತ್ತರ ಟ್ರಾಫಿಕ್‌ ವಿಭಾಗದ ಪೊಲೀಸರು ಆಗಮಿಸಿ ಸಂಚಾರ ವ್ಯವಸ್ಥೆ ಸುಗಮಕ್ಕೆ ಸಹಕರಿಸಿದರಲ್ಲದೆ ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

error: Content is protected !!
%d bloggers like this: