ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ತಾಂಡಾದಲ್ಲಿ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಆರೇ ತಿಂಗಳಿಗೆ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ನ.07 ರಂದು ನಡೆದಿದೆ.
ವರದಕ್ಷಿಣೆ ಕಿರುಕುಳ ಕ್ಕೆ ಬಾಳಿ ಬದುಕಬೇಕಾದ ಯುವತಿ ಕೊನೆಯುಸಿರೆಳೆದಿದ್ದಾಳೆ. ಪೂಜಾ ರಾಠೋಡ್ ಮೃತ ಯುವತಿ. ಇನ್ನು ಈಕೆಯ ಮದುವೆ ವೇಳೆ ಹತ್ತು ತೊಲೆ ಬಂಗಾರ, ಐದು ಲಕ್ಷ ಹಣ ವರದಕ್ಷಿಣೆ ನೀಡಲಾಗಿತ್ತು. ನಂತರ ಎರಡು ಲಕ್ಷ ಹಣ ಕೊಡಲಾಗಿದೆ. ಆದರೂ ನಿತ್ಯ ವರದಕ್ಷಿಣೆ ಕಿರುಕುಳ ನೀಡಲಾಗಿದ್ದು, ಇದಕ್ಕೆ ಬೇಸತ್ತು ಸಾವನ್ನಪ್ಪಿದ್ದಾಳೆ ಎಂದು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅತ್ತೆ ಭುಜಿಬಾಯಿ, ಮಾವ ಉಮೇಶ್ ನಿತ್ಯ ಕಿರುಕುಳ ನೀಡಿದ್ದಾರೆ. ಆದರೆ, ಇವರನ್ನು ಇದುವರೆಗೂ ಬಂಧಿಸಿಲ್ಲ. ಕೇವಲ ಪತಿಯನ್ನು ಮಾತ್ರ ಬಂಧಿಸಿದ್ದಾರೆ. ಕೂಡಲೇ ಬಾಗಲಕೋಟೆ ಗ್ರಾಮೀಣ ಪೊಲೀಸರು ಅತ್ತೆ-ಮಾವನನ್ನು ಬಂಧಿಸಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಇಡೀ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.
ತಂದೆ ಬೇಡ ಎಂದರೂ ಹಠ ಮಾಡಿ ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿದ್ದ ಯುವತಿ
ಮೃತ ಪೂಜಾ ಪದವಿಯ ಕೊನೆ ವರ್ಷದವಳಿದ್ದಾಗ ಗಾರೆ ಕೆಲಸ ಮಾಡುತ್ತಿದ್ದ ವಿಕಾಸ್ ಎಂಬ ಯುವಕನನ್ನು ಪ್ರೀತಿ ಮಾಡುವುದಕ್ಕೆ ಶುರು ಮಾಡಿದ್ದಳು. ಪೂಜಾ ರೂಪವಂತೆ ಹಾಗೂ ಹುಡುಗನಿಗಿಂತ ಉತ್ತಮ ಸ್ಥಿತಿವಂತರು. ಇದರಿಂದ ತಂದೆ ಹಾಮು ರಾಠೋಡ್ ಬೇಡ ಮಗಳೆ ಆತನ ಹಿನ್ನೆಲೆ ಸರಿಯಿಲ್ಲ. ಕುಟುಂಬಸ್ಥರು ಉಳ್ಳವರಲ್ಲ ನಿನಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ವರ ತಂದಿದ್ದೇನೆ ಫೋಟೋ ನೋಡು ಎಂದರೂ ಕನಿಷ್ಟ ಫೋಟೋ ಕೂಡ ನೋಡಿರಲಿಲ್ಲ. ಮದುವೆಯಾದರೆ ವಿಕಾಸನನ್ನೇ ಎಂದು ಹಠ ಮಾಡಿದ್ದಳು. ಒಂದೇ ಸಮುದಾಯ ಇರಲಿ ಬಿಡು ಆಯಿತು ಎಂದು ಕೊನೆಗೂ ಮಗಳ ಪ್ರೀತಿಗೆ ಮಣಿದು ಅದ್ದೂರಿಯಾಗಿ ಮದುವೆ ಮಾಡಿದ್ದ ತಂದೆ. ಆದರೆ, ಇದೀಗ ಮಗಳು ಪ್ರೀತಿಸಿ ಕೈ ಹಿಡಿದವನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ. ನನ್ನ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣವಾಗಿದ್ದು, ಕಿರುಕುಳ ಕೊಟ್ಟವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮಗಳ ಸಾವಿಗೆ ಕಾರಣರಾದವರನ್ನು ಬಂಧಿಸಿದಾಗಲೇ ಆಕೆಯ ಆತ್ಮಕ್ಕೆ ಶಾಂತಿ ಎಂದು ತಂದೆ ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದಾರೆ
ಮಗಳ ಪ್ರೀತಿಗೆ ಮಣಿದು ಆಕೆಯಿಷ್ಟದ ಹುಡುಗನ ಜೊತೆ ಮದುವೆ ಮಾಡಿದ್ದ ತಂದೆ, ಮಗಳ ಖುಷಿ ಕಂಡು ಸಂಭ್ರಮಿಸಿದ್ದ. ಆದರೆ, ಇದೀಗ ಪ್ರೀತಿಸಿ ಮದುವೆಯಾದ ಪತಿಯ ಮನೆಯಲ್ಲೇ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ. ಮೃತಳ ತಂದೆ-ತಾಯಿ ಮೂಲ ಆರೋಪಿಗಳನ್ನು ಬಂಧಿಸಿ ಎಂದು ಗೋಗರೆಯುತ್ತಿದ್ದು, ಪೊಲೀಸರು ಮೂಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.