ಶ್ರೀ ಮದ್ಭಗವದ್ಗೀತೆಯು ವಿಶ್ವಮಾನ್ಯವಾದ ಸರ್ವ ಶ್ರೇಷ್ಠವಾದ ಅನುಕರಣ ಗ್ರಂಥವಾಗಿದೆ. ಇದರಲ್ಲಿ ಭಾರತೀಯ ತತ್ವಶಾಸ್ತ್ರದ ಇಡೀಯ ಸಾರವೇ ಅಡಗಿದೆ. ಇದರಿಂದ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಕೇವಲ ಓದಿಕೊಳ್ಳದೇ, ಅದನ್ನು ಅರಿತು ಅನುಷ್ಠಾನ ಮಾಡಿಕೊಳ್ಳುವ ಪ್ರಯತ್ನಮಾಡಬೇಕೆಂದು ಯಕ್ಷಭಾರತಿ ಕನ್ಯಾಡಿ ಇದರ ಕಾರ್ಯದರ್ಶಿಗಳಾದ ದಿವಾಕರ ಆಚಾರ್ಯ ಗೇರುಕಟ್ಟೆ ಅವರು ಕರೆ ನೀಡಿದರು.
ಇವರು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ, ಸಂಸ್ಕೃತ ಸಂಘ – ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳು, ಶ್ರೀ ಧ.ಮಂ. ಪದವಿಪೂರ್ವ ಕಾಲೇಜು – ಉಜಿರೆ ಮತ್ತು ಯಕ್ಷಭಾರತಿ ಕನ್ಯಾಡಿ(ರಿ), ಶ್ರೀ ಮದ್ಭಾಗವದ್ಗೀತಾ ಅಭಿಯಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ, ಸಂಸ್ಕೃತ ಸಂಘ-ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಜಿರೆಯ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಭಗವದ್ಗೀತಾ ಅಭಿಯಾನ 2023ರ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆಗಳ ಸಮಾರೋಪ ಸಮಾರಂಭದ ಅಭ್ಯಾಗತರಾಗಿ ಮಾತನಾಡಿದರು.
ಅಧ್ಯಕ್ಷ ಸ್ಥಾನ ವಹಿಸಿದ್ದ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯರಾದ ಡಾ.ರಾಜೇಶ್ ಬಿ. ಅವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಗುಣವಂತರಾಗಿ ಇರಲು ಭಗವದ್ಗೀತೆ ಗ್ರಂಥವು ಸಹಾಯ ಮಾಡಬಲ್ಲುದೆಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಯಕ್ಷ ಭಾರತಿ ಕನ್ಯಾಡಿ ಇದರ ವಿಶ್ವಸ್ಥರಾದ ಮಹೇಶ್ ಕನ್ಯಾಡಿ ಉಪಸ್ಥಿತರಿದ್ದರು. ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಗೆದ್ದ ವಿಜೇತರರಿಗೆ ಬಹುಮಾನ ನೀಡಲಾಯಿತು. ವಿಶೇಷವಾಗಿ ಸಹಕರಿಸಿದ ಕುಸುಮಾಕರ ಕಳೆಂಜ ಅವರನ್ನು ಸತ್ಕರಿಸಲಾಯಿತು.
ಸಂಸ್ಕೃತ ಶಿಕ್ಷಕ ಹರೀಶ್ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸುಧಾಶ್ರೀ ಬಹುಮಾನಿತ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಅಭಿಜ್ಞಾ ಉಪಾಧ್ಯಾಯ ಅವರು ಕಾರ್ಯಕ್ರಮ ನಿರೂಪಿಸಿ, ತಾಲೂಕು ಮಟ್ಟದ ಸಂಯೋಜಕರಾದ ಡಾ.ಪ್ರಸನ್ನ ಕುಮಾರ್ ಐತಾಳ್ ವಂದಿಸಿದರು.