ಬಿಗ್ ಬಾಸ್ ಕನ್ನಡ ಸೀಸನ್ 10’ರ ಏಳನೇ ವಾರ ನೀತು ವನಜಾಕ್ಷಿ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನೀತು ವನಜಾಕ್ಷಿ ಅವರು ತೃತೀಯ ಲಿಂಗಿಗಳು. ಅವರಿಂದಲೂ ಹಲವು ವಿಚಾರಗಳು ಸಾಧ್ಯ ಎಂಬುದನ್ನು ನೀತು ಅವರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಎಲ್ಲರಿಂದಲೂ ಅವರು ಭೇಷ್ ಎನಿಸಿಕೊಂಡಿದ್ದಾರೆ. ನೀತು ಕ್ಯಾಪ್ಟನ್ ಆದ ಹೊರತಾಗಿಯೂ ಮನೆಯಿಂದ ಹೊರ ಹೋದರು. ಅದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ನಲ್ಲಿ ಯಾವಾಗಲೂ ವಾರದ ಮಧ್ಯದಲ್ಲಿ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಕ್ಯಾಪ್ಟನ್ ಆದವರಿಗೆ ಆ ವಾರ ಯಾವುದೇ ಇಮ್ಯುನಿಟಿ ಇರುವುದಿಲ್ಲ. ಅವರು ನಾಮಿನೇಟ್ ಆಗಿದ್ದರೂ ಅದನ್ನು ರದ್ದು ಮಾಡುವುದಿಲ್ಲ. ಆ ವಾರ ಅವರು ಉಳಿದುಕೊಂಡರೆ ಮುಂದಿನ ವಾರದ ನಾಮಿನೇಷನ್ನಿಂದ ಹೊರಗೆ ಉಳಿಯುತ್ತಾರೆ. ಇದು ಬಿಗ್ ಬಾಸ್ ನಿಯಮ. ನೀತು ಅವರು ಏಳನೇ ವಾರದ ಮಧ್ಯದಲ್ಲಿ ಕ್ಯಾಪ್ಟನ್ ಆಗಿದ್ದರು. ಜೊತೆಗೆ ನಾಮಿನೇಟ್ ಕೂಡ ಆಗಿದ್ದರು. ಕ್ಯಾಪ್ಟನ್ ಆದ ಹೊರತಾಗಿಯೂ ಅವರು ಎಲಿಮಿನೇಟ್ ಆಗಿದ್ದಾರೆ. ಒಂದೊಮ್ಮೆ ಅವರು ಉಳಿದುಕೊಂಡಿದ್ದರೆ ಈ ವಾರ ನಾಮಿನೇಷನ್ನಿಂದ ಬಚಾವ್ ಆಗುತ್ತಿದ್ದರು.
ಅತಿ ಹೆಚ್ಚು ವೋಟ್ ಪಡೆದು ಡ್ರೋನ್ ಪ್ರತಾಪ್ ಮೊದಲು ಸೇವ್ ಆದರು. ಆ ಬಳಿಕ ತನಿಷಾ, ಸಂಗೀತಾ, ವಿನಯ್ ಶನಿವಾರದ ಎಪಿಸೋಡ್ನಲ್ಲೇ ಸೇಫ್ ಆದರು. ಭಾನುವಾರ ನಮ್ರತಾ, ತುಕಾಲಿ, ಸ್ನೇಹಿತ್ ಸೇವ್ ಆದರು. ಕೊನೆಯಲ್ಲಿ ಸಿರಿ ಹಾಗೂ ನೀತು ಉಳಿದರು. ಕೊನೆಯಲ್ಲಿ ನೀತು ಔಟ್ ಆದರು.
ಬಿಗ್ ಬಾಸ್ನಲ್ಲಿ ಈಗ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗಿದೆ. ಕೇವಲ 11 ಮಂದಿ ಮಾತ್ರ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈಗಾಗಲೇ 50 ಸಂಚಿಕೆ ಪೂರ್ಣಗೊಂಡಿದೆ. ಇನ್ನು ಅರ್ಧ ಜರ್ನಿ ಮಾತ್ರ ಬಾಕಿ ಉಳಿದಿದೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ.