ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಲಿದೆ. ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ನವೆಂಬರ್ 29ರಂದು ಸರಳವಾಗಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅವರಿನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಮೂಲಕ ಪೂಜಾ ಗಾಂಧಿ ಅವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ.
ಪೂಜಾ ಗಾಂಧಿ ಮದುವೆ ಆಗುವ ಹುಡುಗ ಯಾರು?
ಉದ್ಯಮಿಯೊಬ್ಬರ ಜೊತೆ ನಟಿ ಪೂಜಾ ಗಾಂಧಿ ಮದುವೆ ನಡೆಯಲಿದೆ. ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪನಿ ಹೊಂದಿರುವ ವಿಜಯ್ ಎಂಬುವವರ ಜೊತೆ ಅವರು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಇತ್ತೀಚೆಗಿನ ಕೆಲವು ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಅವರಿಬ್ಬರೂ ಮದುವೆ ಆಗುತ್ತಿದ್ದಾರೆ.
ಕನ್ನಡ ಕಲಿಸಿದ ಹುಡುಗ
ನಟಿ ಪೂಜಾ ಗಾಂಧಿ ಅವರು ಮೂಲತಃ ಉತ್ತರ ಪ್ರದೇಶದವರು. ಅವರ ಮಾತೃಭಾಷೆ ಹಿಂದಿ. ಆದರೆ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕನ್ನಡ ಭಾಷೆ ಕಲಿಯುವಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಇರುವ ಪರಭಾಷಿಕರೂ ಕನ್ನಡ ಕಲಿಯಬೇಕು ಎಂದು ಹೇಳುವ ಪೂಜಾ ಗಾಂಧಿ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡಲು ಆರಂಭಿಸಿದ್ದಾರೆ. ಮದುವೆ ಆಗಲಿರುವ ವಿಜಯ್ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದಾರೆ ಎಂದು ಹೇಳಲಾಗಿದೆ. ಈಗ ಪೂಜಾ ಗಾಂಧಿ ಅವರು ಕರ್ನಾಟಕದ ಸೊಸೆ ಆಗುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪೂಜಾ ಗಾಂಧಿ ನಟಿಸಿದ ಮೊದಲ ಸಿನಿಮಾ ‘ಮುಂಗಾರು ಮಳೆ’ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಗಣೇಶ್ ಜೊತೆ ತೆರೆಹಂಚಿಕೊಂಡಿದ್ದ ಪೂಜಾ ಗಾಂಧಿ ಅವರು ರಾತ್ರೋರಾತ್ರಿ ಸ್ಟಾರ್ ನಟಿಯಾದರು. ಆ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರಲು ಆರಂಭಿಸಿದವು. ಪುನೀತ್ ರಾಜ್ಕುಮಾರ್ ಅವರಂತಹ ಸ್ಟಾರ್ ಕಲಾವಿದರ ಜೊತೆ ನಟಿಸಿ ಇನ್ನಷ್ಟು ಜನಪ್ರಿಯತೆ ಪಡೆದರು. ವೈಯಕ್ತಿಕ ಬದುಕಿನಲ್ಲಿ ಪೂಜಾ ಗಾಂಧಿ ಅವರು ಕೆಲವು ಏಳು-ಬೀಳುಗಳನ್ನು ಕಂಡಿದ್ದಾರೆ. 2012ರಲ್ಲಿ ಅವರ ನಿಶ್ಚಿತಾರ್ಥ ನಡೆದಿತ್ತು. ಉದ್ಯಮಿ ಆನಂದ್ ಗೌಡ ಜೊತೆ ಅವರು ಮದುವೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು.