ಧರೆಗುರುಳಿದ್ದ 2,000 ವರ್ಷದ ಹುಣಸೆ ಮರ – ಚಿಕಿತ್ಸೆ ಬಳಿಕ ಮರುಜೀವ

ಶೇರ್ ಮಾಡಿ

ಅನಾರೋಗ್ಯಕ್ಕೆ ತುತ್ತಾದರೆ ಮನುಷ್ಯ, ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ನೆಲಕ್ಕುರುಳಿದ 2,000 ವರ್ಷ ಹಳೆಯ ಮರಕ್ಕೆ ಚಿಕಿತ್ಸೆ ನೀಡಿ ಮತ್ತೆ ಮೊದಲಿದ್ದ ಜಾಗದಲ್ಲಿ ಈಗ ನೆಡಲಾಗಿರುವ ಅಪರೂಪದ ಘಟನೆ ನಡೆದಿದೆ.

ಬರೋಬ್ಬರಿ 2,000 ವರ್ಷದ ಹುಣಸೆ ಮರ ಧರೆಗುರುಳಿ, 4 ತಿಂಗಳ ನಂತರ ಮತ್ತೆ ಚಿಗುರಿದೆ. ಇದು ಹಾವೇರಿ ಜಿಲ್ಲೆಯ ಸವಣೂರುಪಟ್ಟಣದ ಕಲ್ಮಠದ ಆವರಣದಲ್ಲಿ ಕಂಡುಬರೋ ದೊಡ್ಡಹುಣಸೆ. ಈ ಮರ 2,000 ವರ್ಷದಷ್ಟು ಹಳೆಯದು. ಇಲ್ಲೇ ಇರುವ ಅತ್ಯಂತ ಹಳೆಯ 3 ಮರಗಳ ಪೈಕಿ ಈ ಮರ ಜುಲೈ 7 ರಂದು ಮಳೆ-ಗಾಳಿ ಹಾಗೂ ಫಂಗಸ್ ಕಾಣಿಸಿಕೊಂಡ ಹಿನ್ನೆಲೆ ಬೇರು ಸಮೇತ ನೆಲಕ್ಕುರುಳಿತ್ತು.

ಘೋರಕನಾಥ ತಪಸ್ವಿಗಳು ಈ 3 ಮರಗಳನ್ನು ನೆಟ್ಟಿದ್ದರು ಎಂದು ಹೇಳಲಾಗುತ್ತದೆ. 18 ಮೀ. ಎತ್ತರ, 12 ಮೀ. ಅಗಲವಾಗಿದ್ದ ಈ ಮರ ಬೀಳುತ್ತಿದ್ದಂತೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು. ಸತತ 1 ವಾರ ಕಾರ್ಯಾಚರಣೆ ನಡೆಸಿ ದೊಡ್ಡಹುಣಸೆ ಮರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಈಗ 4 ತಿಂಗಳ ನಂತರ ಮರಕ್ಕೆ ಮರುಜನ್ಮ ಸಿಕ್ಕಿದೆ. ದೊಡ್ಡಹುಣಸೆ ಮರವು ಮೊದಲಿನಂತೆ ಚಿಗುರೊಡೆಯುತ್ತಿದೆ. ಸಣ್ಣದಾಗಿ ರಂಬೆ, ಕೊಂಬೆಗಳು ಚಿಗುರುತ್ತಿವೆ. ಇದರಿಂದ ಕಲ್ಮಠ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಖಷಿಯಾಗಿದ್ದಾರೆ.

ಮರದ ಬುಡದಲ್ಲಿ ಬೇರುಗಳಲ್ಲಿ ಫಂಗಸ್ ಆಗಿ ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿತ್ತು. ಮರದ ಬುಡದಲ್ಲಿ ಕೊಳೆತ ಭಾಗವನ್ನು ಸ್ವಚ್ಛ ಮಾಡಿ, ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಗಿತ್ತು. ಭೂಮಿಯಲ್ಲಿ ತೋಡಿರುವ ಗುಂಡಿಯಲ್ಲಿಯೂ ರಾಸಾಯನಿಕಗಳನ್ನು ಹಾಕಲಾಗಿದೆ. ಮರದ ಟೊಂಗೆಗಳನ್ನು ಕತ್ತರಿಸಿ, ಸಗಣಿಯನ್ನು ಸಿಂಪಡಣೆ ಮಾಡಿ ಟ್ರೀಟ್‌ಮೆಂಟ್ ಮಾಡಲಾಗಿತ್ತು. ಇದೆಲ್ಲದರ ಬಳಿಕ ಬೃಹತ್ ಗಾತ್ರದ ಕ್ರೇನ್ ಹಾಗೂ ಜೆಸಿಬಿಗಳನ್ನು ಬಳಸಿಕೊಂಡು ಮರವನ್ನು ಅದೇ ಸ್ಥಳದಲ್ಲಿ ನೆಡಲಾಗಿತ್ತು. 2,000 ವರ್ಷ ಐತಿಹಾಸಿಕ ಹಿನ್ನೆಲೆಯುಳ್ಳ ಮರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಈಗ ದೊಡ್ಡಹುಣಸೆ ಮರ ಚಿಗುರಿಕೊಂಡಿದೆ. ಈ ಮರವನ್ನು ನೋಡಲು ಸುತ್ತಮುತ್ತಲಿನ ಪ್ರವಾಸಿಗರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಒಟ್ಟಿನಲ್ಲಿ ಮಠದ ಶ್ರೀಗಳು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡದ ಸತತ ಪರಿಶ್ರಮದಿಂದ 2,000 ವರ್ಷದ ಮರಕ್ಕೆ ಮರುಜೀವ ಸಿಕ್ಕಿದೆ. ಪುನಃಜನ್ಮ ಕಂಡ ದೊಡ್ಡಹುಣಸೆ ಮರವನ್ನು ನೋಡಲು ನೂರಾರು ಜನರು ಆಗಮಿಸುತ್ತಿದ್ದಾರೆ

Leave a Reply

error: Content is protected !!