ಮಂಗಳೂರು: ಕೆತ್ತಿಕಲ್​​ನಲ್ಲಿ 500 ವರ್ಷ ಇತಿಹಾಸವಿರುವ ಅಪರೂಪದ ಕಲ್ಲು ಪತ್ತೆ

ಶೇರ್ ಮಾಡಿ

ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಎಂಬಲ್ಲಿ ಸ್ಥಳದ ಹೆಸರು ಬರಲು ಕಾರಣ ಎನ್ನಲಾದ ಕಲ್ಲು ಪತ್ತೆಯಾಗಿದೆ. ಈ ಕಲ್ಲು ಹಲವು ವರ್ಷಗಳಿಂದ ಗಿಡಗಂಟಿಗಳ ಎಡೆಯಲ್ಲಿ ಹುದುಗಿತ್ತು. ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದಾಗ ಕಲ್ಲು ಪತ್ತೆಯಾಗಿದೆ.

ಕಲ್ಲು ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ಅಲ್ಲಿಗೆ ಹೋಗಿ, ಕಲ್ಲನ್ನು ತಕ್ಷಣ ತೆರವು ಮಾಡಬಾರದು. ನೂರಾರು ವರ್ಷಗಳ ಇತಿಹಾಸವಿದ್ದು, ಈ ಮಾಹಿತಿ ಕಲ್ಲಿನಲ್ಲಿ ಲಭಿಸಬಹುದಾದ್ದರಿಂದ ಕಲ್ಲನ್ನು ತೆರವುಗೊಳಿಸದಂತೆ ಸ್ಥಳೀಯರು ಮನವಿ ಮಾಡಿದರು. ಕಲ್ಲನ್ನು ಗೌರವಯುತವಾಗಿ ಬೇರೆ ಸ್ಥಳಾಂತರಿಸುವಂತೆ ಕೇಳಿಕೊಂಡರು. ಮನವಿಗೆ ಸಮ್ಮತಿಸಿದ ಎನ್​ಹೆಚ್​ಎಐ ಅಧಿಕಾರಿಗಳು ಕ್ರೇನ್ ಮತ್ತು ಹಗ್ಗ ಬಳಸಿ ಕಲ್ಲು ಸ್ಥಳಾಂತರಿಸುವುದಾಗಿ ತಿಳಿಸಿದರು.

ಕೆತ್ತಿದ ಈ ಕಲ್ಲಿನಿಂದಾಗಿ ಈ ಸ್ಥಳಕ್ಕೆ ಕೆತ್ತಿಕಲ್ ಎಂಬ ಹೆಸರು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದು 500 ವರ್ಷಗಳಷ್ಟು ಹಳೆಯದಂತೆ ತೋರುತ್ತದೆ. ಎತ್ತಿನ ಗಾಡಿಯಲ್ಲಿ ಸಾಗುವಾಗ ಈ ಕಲ್ಲಿನ ಮೇಲೆ ಜನರು ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ ಸ್ಥಳೀಯ ಕಲಾಮೃತ ಕಲಾವಿದರ ಸಂಘಟನೆಯ ಉಮೇಶ್ ಕೋಟ್ಯಾನ್.

ಕೆತ್ತಿಕಲ್​ನಲ್ಲಿ ದಶಕಗಳ ಹಿಂದೆ ಗುಡ್ಡ ಜರಿತವೂ ಸಂಭವಿಸಿತ್ತು. ಆದಾಗ್ಯೂ, ಗುಡ್ಡದ ವಿರುದ್ಧ ದಿಕ್ಕಿನಲ್ಲಿ ಕಣಿವೆ ಭಾಗಕ್ಕೆ ಹೆದ್ದಾರಿಯ ಬದಿಯಲ್ಲಿ ಈ ಕಲ್ಲು ಸ್ಥಿರವಾಗಿದೆ. ಇದು ಶಿವಲಿಂಗದಂತೆ ಕಾಣುತ್ತದೆ. ಆದರೆ ಅದು ಕಪ್ಪು ಕಲ್ಲಿನಲ್ಲಿ ಮಾಡಿದ್ದಲ್ಲ. ಬದಲಿಗೆ ಕೆಂಪುಕಲ್ಲಿನಲ್ಲಿ ವೃತ್ತಾಕಾರದಿಂದ ಕೆತ್ತಲಾಗಿದೆ. ಕಲ್ಲಿನ ಮೇಲೆ ಯಾವುದೇ ಶಾಸನ ಕಂಡುಬಂದಿಲ್ಲ. ಇಲ್ಲಿ ‘ಅಣ್ಣಾಜಿ’ ಸಿನಿಮಾದ ಚಿತ್ರೀಕರಣವೂ ನಡೆದಿತ್ತು ಎಂದು ಉಮೇಶ್ ಕೋಟ್ಯಾನ್ ಹೇಳಿದರು.

Leave a Reply

error: Content is protected !!