ವಿಚಿತ್ರ ಸಂಗತಿಯೊಂದು ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬಸ್ ನಿಲ್ದಾಣದ ಬಳಿ ಇರುವ ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲಿನ ಬಣ್ಣವನ್ನೇ ಹೋಲುವ ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ.
ಹೌದು ಉತ್ತರ ಪ್ರದೇಶದ ಮೊರಾಬಾದ್ ನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಇರುವಂತಹ ಬೋರ್ ವೆಲ್ ನಲ್ಲಿ ನೀರಿನ ಬದಲು ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ. ಅಲ್ಲದೆ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೀಗೆ ವೈರಲ್ ಆಗುತ್ತಿದ್ದಂತೆ ಬೋರ್ ವೆಲ್ ಬಳಿ ಸಾಕಷ್ಟು ಮಂದಿ ಜಮಾಯಿಸಿದ್ದು ಈ ನಡುವೆ ಇಲ್ಲಿ ಸೇರಿದ ಜನ ಇದು ನೀರಲ್ಲ ಹಾಲು ಎಂದು ಭಾವಿಸಿ ಮನೆಯಿಂದ ಬಾಟಲಿ, ಪಾತ್ರೆ, ಕ್ಯಾನ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ತಂದು ಸರತಿ ಸಾಲಿನಲ್ಲಿ ನಿಂತು ಪಾತ್ರೆಗಳಿಗೆ ತುಂಬಿಸಿ ಮನೆಗೆ ಒಯ್ಯುತ್ತಿದ್ದಾರೆ.
ಬೋರ್ ವೆಲ್ ನಲ್ಲಿ ಹಾಲು ಬರುತ್ತಿರುವ ವಿಚಾರ ಇಲ್ಲಿನ ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದೆ ಆ ಬಳಿಕ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೋರಿಂಗ್ ಪರಿಶೀಲನೆ ನಡೆಸಿದರು. ಈ ವೇಳೆ ಬೋರ್ ವೆಲ್ ನಲ್ಲಿ ಬರುತ್ತಿರುವುದು ಹಾಲಲ್ಲ ಬದಲಾಗಿ ಕಲುಷಿತ ನೀರು ಎಂದು ಮನವರಿಕೆ ಮಾಡಿದ್ದಾರೆ.
ಹ್ಯಾಂಡ್ ಪಂಪ್‌ನ ಕೆಳಭಾಗವು ಹಾನಿಗೊಳಗಾಗಿದ್ದು, ಅದನ್ನು ಪ್ಲಗ್ ಮಾಡಿದಾಗ ಬಿಳಿ ಬಣ್ಣದ ಕಲುಷಿತ ನೀರು ಸೋರಿಕೆಯಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ತನಿಖೆ ನಡೆಸುವಂತೆ ಬಿಲಾರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪುರಸಭೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬೋರಿಂಗ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ನೀರು ಸೇವನೆಗೆ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.