ತನ್ನ ಪ್ರೇಯಸಿಯನ್ನು ವಿವಾಹವಾಗಲು ಮಹಿಳೆಯೊಬ್ಬರು ಗಂಡಾಗಿ ಬದಲಾಗಲು ಲಿಂಗವನ್ನೇ ಬದಲಾಯಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಹೆಣ್ಣಾಗಿ ಹುಟ್ಟಿದ ಅಲ್ಕಾ ಸೋನಿ ಅಸ್ತಿತ್ವ ಎಂದು ಹೆಸರು ಬದಲಾಯಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿ ಗಂಡಾಗಿ ಬದಲಾಗಿದ್ದಾರೆ.
ಅಲ್ಕಾ ಸೋನಿ ದಿನಕಳೆದಂತೆ ತಾನು ಹುಡುಗಿಯಲ್ಲ ಹುಡುಗ ಎನ್ನುವ ಭಾವನೆಯಲ್ಲಿ ಬದುಕಲು ಶುರು ಮಾಡಿದ್ದಾರೆ. ಈ ವೇಳೆ ಅವರಿಗೆ ಆಸ್ತಾ ಎನ್ನುವ ಯುವತಿಯ ಪರಿಚಯವಾಗಿದೆ. ಪರಿಚಯ ದಿನಕಳೆದಂತೆ ವಿಶೇಷ ಬಾಂಧವ್ಯಕ್ಕೆ ತಿರುಗಿದೆ. ಪರಸ್ಪರ ಪ್ರೀತಿಸುವ ಮಟ್ಟಿಗೆ ಇಬ್ಬರ ಸ್ನೇಹ ಬೆಳೆದಿದೆ. ಆದರೆ ಅಲ್ಕಾಳಿಗೆ ಪುರುಷ ಹಾವ – ಭಾವದಲ್ಲೇ ಹೆಚ್ಚಿನ ಆಸಕ್ತಿ ಇತ್ತು.
ಈ ಕಾರಣದಿಂದ ತನ್ನ 47ನೇ ಹುಟ್ಟುಹಬ್ಬದಂದು ಅಲ್ಕಾ ಲಿಂಗ ರೂಪಾಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆ ಬಳಿಕ ತಮ್ಮ ಹೆಸರನ್ನು ಅಸ್ತಿತ್ವ ಎಂದು ಬದಲಾಯಿಸಿಕೊಂಡಿದ್ದಾರೆ. ಇದಾದ ನಂತರ ಅಸ್ತಿತ್ವ ಹಾಗೂ ಆಸ್ತಾ ಕಾನೂನು ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಭಿನ್ನಲಿಂಗೀಯ ಸಂಬಂಧದಲ್ಲಿರುವ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ ಆ ಬಳಿಕ ಆಸ್ತಾ – ಅಸ್ತಿತ್ವ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಇತ್ತೀಚೆಗೆ ವಿಶೇಷ ವಿವಾಹ ಕಾಯ್ದೆಯಡಿ ಮಧ್ಯಪ್ರದೇಶದ ಇಂದೋರ್ನಲ್ಲಿ ಅಲ್ಕಾ ಯಾನೆ ಅಸ್ತಿತ್ವ ತನ್ನ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಈ ವೇಳೆ ಎರಡೂ ಕುಟುಂಬದ ಸದಸ್ಯರು ಸಾಕ್ಷಿಯಾಗಿದ್ದರು.
ತಮ್ಮ ಮದುವೆಗೆ ಮುನ್ನ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಇಂದೋರ್ ಡೆಪ್ಯೂಟಿ ಕಲೆಕ್ಟರ್ ರೋಶನ್ ರೈ ಅವರಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಪರಿಶೀಲನೆಯ ನಂತರ ಅವರ ಅರ್ಜಿಯನ್ನು ಸ್ವೀಕರಿಸಲಾಯಿತು. ಆ ಬಳಿಕ ಎರಡೂ ಕಡೆಯವರಿಗೆ ಸೂಚನೆ ನೀಡಲಾಯಿತು.
ಅಲ್ಕಾರನ್ನು(ಅಸ್ತಿತ್ವ) ಮೊದಲು ಆಸ್ತಾ ಮೊದಲು ಅವರ ಮನೆಯಲ್ಲಿ ಭೇಟಿಯಾಗಿದ್ದರು. ಅಲ್ಕಾರ ತಂಗಿ ಆಸ್ತಾ ಅವರ ಸ್ನೇಹಿತೆಯಾಗಿದ್ದರು.
ಸದ್ಯ ಇಬ್ಬರು ಕೋರ್ಟ್ ಮ್ಯಾರೇಜ್ ಆಗಿದ್ದು, ಸೋಮವಾರ (ಡಿ.11 ರಂದು) ಎರಡೂ ಮನೆಯವರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದ್ದಾರೆ.