ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭವಾನಿನಗರದಲ್ಲಿ ನಡೆದಿದೆ. ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ಬಿಇ ಪ್ರಥಮ ವರ್ಷದ ವಿದ್ಯಾರ್ಥಿ. ತಂದೆಯ ಗನ್ನಿಂದ ಫೈರ್ ಮಾಡಿ ವಿಶು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಡಗು ಮೂಲದ ತಮ್ಮಯ್ಯ ಎಂಬವರು ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದು, ಕಳೆದ 15 ವರ್ಷದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರದಲ್ಲಿ ಕುಟುಂಬ ಸಹಿತ ವಾಸವಿದ್ದರು.
ತಂದೆ ರೇಷನ್ ತರಲು ಹೋದಾಗ ವಿಶು ಗನ್ನಿಂದ ಫೈಯರ್ ಮಾಡಿಕೊಂಡು ತಂದೆಗೆ ಕರೆ ಮಾಡಿದ್ದಾನೆ. ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾನೆ. ಗಾಬರಿಗೊಂಡ ತಂದೆ ಮನೆಗೆ ದೌಡಾಯಿಸಿ ಬಂದು ನೋಡಿದಾಗ ವಿಶು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಶು ಉತ್ತಮ ಮೃತಪಟ್ಟಿದ್ದಾನೆ.