12 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ ಸಹೋದರ.. ಕೋರ್ಟಿನ ಮೊರೆ ಹೋದ ಪಾಲಕರು

ಶೇರ್ ಮಾಡಿ

ಆ ಇಬ್ಬರು ಮಕ್ಕಳು ಜಗದ ಗೊಡವೆ ಹಚ್ಚಿಕೊಳ್ಳದೆ ತಮ್ಮದೇ ಲೋಕದಲ್ಲಿ ಅಬೋಧರಾಗಿ ಸ್ವಚ್ಚಂದವಾಗಿ ಕಾಲಕಳೆಯಬೇಕಾದ ವಯಸ್ಸಿನವರು. ಆದರೆ ಯಾವುದೋ ಘಳಿಗೆಯಲ್ಲಿ ಕ್ಷಣಿಕ ಸುಖಕ್ಕೆ ಬಲಿಯಾಗಿ ಅನಾಹುತ ಮಾಡಿಕೊಂಡಿದ್ದಾರೆ. ಮುಂದೇನು ಎಂದು ಅಪ್ಪ-ಅಮ್ಮನಿಗೆ ತೋಚದಂತಹ ಭೀಕರ ಪರಿಸ್ಥಿತಿ ತಂದಿಟ್ಟಿದ್ದಾರೆ. ಆ ಚಿತ್ರಣ ನೆನಪಿಸಿಕೊಂಡರೆ ಎಂಥವರಿಗೇ ಆಗಲಿ ಎದೆ ಝಲ್ಲೆನ್ನುತ್ತದೆ.

ದಿನೇ ದಿನ ಮಾನವೀಯ ಬಂಧಗಳು ಮೌಲ್ಯ ಕಳೆದುಕೊಂಡು ನಶಿಸುತ್ತಿವೆ. ಅನೈತಿಕ ಸಂಬಂಧಗಳು ಕುಟುಂಬಗಳನ್ನೇ ಛಿದ್ರ ಛಿದ್ರಗೊಳಿಸುತ್ತಿವೆ. ಇತ್ತೀಚೆಗೆ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಾಳೆ. ಅದೂ ಸಹ ಸಹೋದರನಿಂದ ಗರ್ಭಿಣಿಯಾದ ಕಾರಣಕ್ಕೆ ಆಕೆಯ ತಂದೆ-ತಾಯಿ ತಮ್ಮ ಮಗಳ ಗರ್ಭಧಾರಣೆಯನ್ನು ರದ್ದುಗೊಳಿಸುವಂತೆ ಅವರು ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಈ ಅನೈತಿಕ ಘಟನೆ ನಡೆದಿರುವುದು ಕೇರಳದಲ್ಲಿ. ಅಪ್ರಾಪ್ತ ವಯಸ್ಸಿನ ಸಹೋದರನಿಂದ ಗರ್ಭಿಣಿಯಾದ 12 ವರ್ಷದ ಬಾಲಕಿಯ ಪೋಷಕರು ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಗರ್ಭಪಾತ ಮಾಡಿಸುವಂತೆ ಬಾಲಕಿಯ ಪೋಷಕರು ಕೋರ್ಟ್​​​ಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವೈದ್ಯರ ವರದಿಗಳನ್ನು ಪರಿಶೀಲಿಸಿ, ಪರಿಗಣಿಸಿದ್ದಾರೆ. ಬಾಲಕಿ 34 ವಾರಗಳ ಗರ್ಭಿಣಿಯಾಗಿದ್ದು, ಸಂಪೂರ್ಣ ಬೆಳವಣಿಗೆ ಹೊಂದಿರುವ ಭ್ರೂಣ ರೂಪ ಪಡೆಯುತ್ತಿದೆ ಎಂದು ವೈದ್ಯಕೀಯ ವರದಿ ಹೇಳಿದೆ. ಹಾಗಾಗಿ ಈ ಸಮಯದಲ್ಲಿ ಗರ್ಭಪಾತ ಮಾಡುವುದು ಕಷ್ಟ ಎಂದು ಬಾಲಕಿಯ ಪೋಷಕರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಹಂತದಲ್ಲಿ ಗರ್ಭಪಾತ ಅಸಾಧ್ಯ ಎಂದು ಹೇಳಿರುವ ರಾಜ್ಯ ಹೈಕೋರ್ಟ್, ಸಿಸೇರಿಯನ್ ಅಥವಾ ಸಾಮಾನ್ಯ ಹೆರಿಗೆ ಮೂಲಕ ಮಗು ಜನಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದೆ. ಹೆರಿಗೆಗೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ವೈದ್ಯಕೀಯ ತಜ್ಞರಿಗೆ ಬಿಡಲಾಗಿದೆ ಎಂದೂ ಹೈಕೋರ್ಟ್ ಹೇಳಿದೆ. ಮಗು ಜನಿಸಿದ ನಂತರ, ಮಗುವಿಗೆ ರಕ್ಷಣೆ ನೀಡಲು ನ್ಯಾಯಾಲಯ ನಿರ್ಧರಿಸಿದೆ.

ಮಗಳು ಗರ್ಭಿಣಿಯಾಗಿರುವ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ಬಾಲಕಿಯ ಪೋಷಕರು ನ್ಯಾಯಾಲಯದಲ್ಲಿ ಹೇಳಿದ್ದು, ಇತ್ತೀಚೆಗಷ್ಟೇ ಅದು ತಿಳಿದುಬಂದಿದ್ದಾಗಿ ತಿಳಿಸಿದ್ದಾರೆ. ಮಗಳಿಗೆ ಕೇವಲ 12 ವರ್ಷ. ಹಾಗಾಗಿ ಈ ವಯಸ್ಸಿನಲ್ಲಿ ಮಗು ಜನಿಸಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅವಳಿಗೆ ತೀವ್ರ ಘಾಸಿಯಾಗುವ ಸಾಧ್ಯತೆ ಇದೆ. ಹಾಗಾಗಿ ಮಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಪೋಷಕರ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಇನ್ನು 15 ದಿನದಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ. ಈಗ ಗರ್ಭಪಾತ ಮಾಡಿಸಿದರೆ ತಾಯಿಯ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಗರ್ಭಪಾತ ಮಾಡುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಗರ್ಭಿಣಿ ಅಪ್ರಾಪ್ತ ಬಾಲಕಿಯನ್ನು ಆಕೆಯ ಸಹೋದರನಿಂದ ದೂರವಿಡಬೇಕು ಮತ್ತು ಬಾಲಕಿಯನ್ನು ಆಕೆಯ ಪೋಷಕರ ಆರೈಕೆಯಲ್ಲಿ ಇಡಬೇಕು ಎಂದು ಆದೇಶಿಸಿದರು.

Leave a Reply

error: Content is protected !!