ಕಾಂಕ್ರೀಟ್ ಮಿಕ್ಸಿಂಗ್ ಲಾರಿಯೊಂದು ವಿದ್ಯುತ್ ತಂತಿಗಳನ್ನು ಎಳೆದಾಡಿ,ಎರಡು ವಿದ್ಯುತ್ ಕಂಬಗಳನ್ನು ರಸ್ತೆಗೆ ಉರುಳಿಸಿದ ಘಟನೆ ನಾಲ್ಕೂರು ಗ್ರಾಮದ ಸೂಳಬೆಟ್ಟು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟು ಎಂಬಲ್ಲಿ ಲಾರಿಯ ಚಾಲಕ ಮೇಲ್ಬಾಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಗಮನಿಸದೆ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ. ಅದು ಚಾಲಕನ ಗಮನಕ್ಕೆ ಬಾರದೆ ಆತ ಏಕಾಏಕಿ ಮುಂದುವರಿದಿದ್ದಾನೆ ಇದರಿಂದ ತಂತಿಗಳೊಂದಿಗೆ ಎರಡು ಜೋಡಿ ಕಂಬಗಳು ರಸ್ತೆಗೆ ಅಡ್ಡಲಾಗಿ ರಸ್ತೆಗೆ ಉರುಳಿ ಬಿದ್ದವು. ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿಯು ಕಾಣಿಸಿತ್ತು.
ಕಾರ್ಕಳದ ಕನ್ಸ್ಟ್ರಕ್ಷನ್ ಕಂಪೆನಿ ಯೊಂದರ ಲಾರಿಯಾಗಿದ್ದು ಅದನ್ನು ಅಳದಂಗಡಿಯಲ್ಲಿ ತಡೆಹಿಡಿಯಲಾಗಿದೆ. ಚಾಲಕ ಕುಷ್ಟಗಿಯ ಕುಮಾರ್ ಎಂಬಾತ ನಾಗಿದ್ದು ಆತನನ್ನು ವೇಣೂರು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು.ಸ್ಥಳಕ್ಕೆ ಮೆಸ್ಕಾಂ ಇಂಜಿನಿಯರ್, ವೇಣೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.15 ವಿದ್ಯುತ್ ಪರಿವರ್ತಕಗಳ ವ್ಯಾಪ್ತಿಯ 800 ಕ್ಕಿಂತ ಅಧಿಕ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು. ಘಟನೆ ರಾತ್ರಿ ನಡೆದ ಕಾರಣ ಹಾಗೂ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ.
-ಮುಚ್ಚಳಿಕೆ-
ಘಟನೆಯಿಂದ ಮೆಸ್ಕಾಂಗೆ 70,000ರೂ.ಗಿಂತ ಅಧಿಕ ನಷ್ಟ ಉಂಟಾಗಿದ್ದು,ಅದನ್ನು ಕನ್ಸ್ಟ್ರಕ್ಷನ್ ಕಂಪನಿ ವತಿಯಿಂದ ಭರಿಸಲಾಗುವುದು ಎಂದು ಠಾಣೆಯಲ್ಲಿ ಮುಚ್ಚಳಿಕೆ ನೀಡಲಾಗಿದೆ. ಸದ್ಯಕ್ಕೆ ಕಂಬಗಳು ಮುರಿದ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ ಕೈಗೊಂಡಿದ್ದು, ವಿದ್ಯುತ್ ಪೂರೈಕೆ ಮಾಡಲಾಗಿದೆ.