ಕೇಂದ್ರ ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ಮಹತ್ವದ ಆದೇಶ ನೀಡಿದ್ದು, ಇದು ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ಹೆಚ್ಚಿನ ಅನುಕೂಲ ವಾತಾವರಣ ಒದಗಿಸಲಿದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗಿನ ಎಲ್ಲ ಕೋರ್ಸ್ಗಳ ಪಠ್ಯವನ್ನು ಡಿಜಿಟಲ್ ರೂಪದಲ್ಲಿ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವಂತೆ ಕೇಂದ್ರ ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಇದಕ್ಕಾಗಿ 3 ವರ್ಷಗಳ ಗಡುವನ್ನು ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೀಡಿದೆ.
ಶಾಲೆಗಳು, ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳು ಅವರದ್ದೇ ಭಾಷೆಯಲ್ಲಿ ಕಲಿಯುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಇಲಾಖೆಯು ಈ ಆದೇಶ ಹೊರಡಿಸಿದೆ. ಸಂವಿಧಾನದ 8ನೇ ಪರಿಚ್ಛೇದಲ್ಲಿರುವ ಎಲ್ಲ ಭಾಷೆಗಳಲ್ಲೂ ಕಲಿಕಾ ಸಾಮಾಗ್ರಿಯನ್ನು ಒದಗಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುವುದು ಹೇಗೆ?
ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು
ವಿದ್ಯಾರ್ಥಿಗಳ ಕಲಿಕೆಗೆ ಭಾಷೆ ಅಡ್ಡಿ ಆಗಬಾರದು. ಶಿಕ್ಷಣದ ಎಲ್ಲ ಹಂತಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಕಲಿಕೆಗೆ ಉತ್ತೇಜನ ನೀಡುವ ಹಾಗೂ ಉತ್ತಮ ಕಲಿಕಾ ಫಲಗಳನ್ನು ಪಡೆಯುವ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಭಾಷಾ ವೈವಿಧ್ಯವು ಬಹುದೊಡ್ಡ ಸಂಪನ್ಮೂಲವಾಗಲಿದೆ. ಇದರ ಬಳಕೆಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರೋತ್ಸಾಹಿಸುತ್ತದೆ. ಸ್ಥಳೀಯ ಭಾಷೆಗಳಲ್ಲಿ ಕಲಿಕಾ ಸಾಮಾಗ್ರಿ ರಚನೆ ಭಾಷಾ ಸಮೃದ್ಧಿಗೆ ಕಾರಣವಾಗಲಿದೆ. ಆ ಮೂಲಕ ವಿಕಸಿತ ಭಾರತಕ್ಕೆ ಕೊಡುಗೆ ನೀಡಲಿದೆ ಎಂಬ ಆಶಯ ಹೊಂದಲಾಗಿದೆ.
ಯಾವೆಲ್ಲ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ?
ಯುಜಿಸಿ, ಎಐಸಿಟಿಇ, ಎನ್ಸಿಇಆರ್ಟಿ, ಎನ್ಐಒಎಸ್ (ಮುಕ್ತ ಶಾಲೆ), ಇಗ್ನೊ, ಐಐಟಿ, ಎನ್ಐಟಿ, ಐಐಎಂ, ಕೇಂದ್ರೀಯ ವಿದ್ಯಾಲಯಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರದ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಈ ನಿಟ್ಟಿನಲ್ಲಿ ಕ್ರಮ ವಹಿಸಲು ಯುಜಿಸಿ, ಎಐಸಿಟಿಇ, ಹಾಗೂ ಕೇಂದ್ರದ ಶಾಲಾ ಶಿಕ್ಷಣ ಇಲಾಖೆಗಳಿಗೆ ತಿಳಿಸಲಾಗಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ಸಿದ್ಧತೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಹಿಂದಿನ ಎರಡು ವರ್ಷಗಳಿಂದ ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದೆ. ಇಂಜಿನಿಯರಿಂಗ್, ವೈದ್ಯ, ಕಾನೂನು, ಪದವಿ ಹಾಗೂ ಸ್ನಾತಕೋತ್ತರ ಪಠ್ಯಪುಸ್ತಕಗಳನ್ನು ಕೃತಕ ಬುದ್ಧಿಮತ್ತೆ ಆಧಾರಿತ ‘ಅನುವಾದಿನಿ’ ತಂತ್ರಾಂಶದ ಮೂಲಕ ಸಿದ್ಧಪಡಿಸುತ್ತಿದೆ. ಈ ಪುಸ್ತಕಗಳು ‘ಇಕುಂಭ’ ಪೋರ್ಟಲ್ನಲ್ಲಿ ಲಭ್ಯವಿದೆ. ಜತೆಗೆ ಶಾಲಾ ಪುಸ್ತಕಗಳನ್ನು ದೀಕ್ಷಾ ಪೋರ್ಟಲ್ನಲ್ಲಿ 30 ಭಾಷೆಗಳಲ್ಲಿ ಒದಗಿಸಲಾಗಿದೆ. ಅಲ್ಲದೇ ಜಂಟಿ ಪ್ರವೇಶ ಪರೀಕ್ಷೆ(ಜೆಇಇ), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್), ಸಿಯುಇಟಿ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.