ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಇಂದು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ, ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ನೇರಪ್ರಸಾರ, ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳು ನಡೆದವು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ ಹರಕೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ರಾಮಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಕೆಲವು ದಿನಗಳ ಮೊದಲು, ನಾನು ಈ ಸೆವೆಯನ್ನು ಮಾಡಲು ಪ್ರತಿಜ್ಞೆ ಮಾಡಿದ್ದೆ. ಈ ಹರಕೆಯನ್ನು ಇಂದು ಬೆಳಗ್ಗೆ 8.30ಕ್ಕೆ ಸಲ್ಲಿಸಿದ್ದೇನೆ ಎಂದರು. ಹಿಂದಿನ ಅವಧಿಯಲ್ಲಿ ಶಂಕುಸ್ಥಾಪನೆ ಮಾಡುವಾಗ ನಾನು ಶಾಸಕನಾಗಿದ್ದೆ. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಎರಡನೇ ಬಾರಿಗೆ ಶಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತದ ಜಂಟಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ರಾಮಜನ್ಮಭೂಮಿಯನ್ನು ಹಿಂಪಡೆಯಲು 500 ವರ್ಷಗಳ ಕಾಲ ನಡೆದ ಹೋರಾಟವನ್ನು ಬಾಲರಾಮನ ಪ್ರತಿಷ್ಠಾಪನೆಯು ಮುಕ್ತಾಯಗೊಳಿಸುತ್ತದೆ. ಇದು ಭಾರತದಾದ್ಯಂತ ದೀಪಾವಳಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ. ರಾಮ ಮಂದಿರವು ಜಾತಿ ಮತ್ತು ಧರ್ಮದ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ ಮತ್ತು ರಾಮರಾಜ್ಯದ ರಚನೆಗೆ ದಾರಿ ಮಾಡಿಕೊಡುತ್ತದೆ ಎಂದರು.
ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಇದಲ್ಲದೆ, ಭಜನಾ ಮಂದಿರಗಳು ಮತ್ತು ಸಣ್ಣ ದೇವಾಲಯಗಳಲ್ಲಿಯೂ ಪೂಜೆಗಳನ್ನು ನಡೆಸಲಾಗಿದೆ.
ಅನೇಕ ದೇವಾಲಯಗಳಲ್ಲಿ ಎಲ್‌ಇಡಿ ಪರದೆಗಳನ್ನು ಹಾಕಿ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ ಕ್ಷಣಗಳನ್ನು ವೀಕ್ಷಿಸಲು ಅನುವುಮಾಡಿಕೊಡಲಾಗಿತ್ತು. ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಜನರು ಬಾಲರಾಮನ ಪ್ರಣಾಪ್ರತಿಷ್ಠಾಪನೆಯನ್ನು ವೀಕ್ಷಿಸಿದರು. ಮಂಗಳೂರಿನ ಕಾರ್ ಸ್ಟ್ರೀಟ್ ಪ್ರದೇಶದಲ್ಲಿ ಬಸ್ ಹಾಗೂ ವಾಹನಗಳಲ್ಲಿ ಸಂಚರಿಸುವವರಿಗೆ ಸಿಹಿ ವಿತರಿಸಲಾಯಿತು.
ಬೀದಿಗಳಲ್ಲಿ ಎಲ್‌ಇಡಿ ಪರದೆಗಳನ್ನು ಹಾಕಿ ರಾಮಮಂದಿರ ಉದ್ಘಾಟನೆಯ ನೇರ ಪ್ರದರ್ಶನ ಮಾಡಲಾಗಿತು. ವಿಟಿ ರಸ್ತೆಯಲ್ಲಿರುವ ಶ್ರೀ ವಿತೋಭಾ ರುಕ್ಮಯಿ ದೇವಸ್ಥಾನದ ವತಿಯಿಂದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯಕ್ಕೆ ನೀಡುವ ಭಕ್ತರಿಗೆ ಮಾತ್ರವಲ್ಲದೆ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಮರೋಳಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹವನ ನಡೆಯಿತು.