ಬಸ್ ಪಾಸ್ನ ನಕಲು ಪ್ರತಿಯನ್ನು ತೋರಿಸಿದ್ದಕ್ಕಾಗಿ ಬಸ್ನ ನಿರ್ವಾಹಕ ಕಾಲೇಜು ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಬುಧವಾರ ಬೆಳಗ್ಗೆ ಕಡಬದಲ್ಲಿ ಸಂಭವಿಸಿದೆ.
ನೂಜಿಬಾಳ್ತಿಲ ಕಲ್ಲುಗುಡ್ಡೆಯಿಂದ ಕಡಬ, ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ. ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕಲ್ಲುಗುಡ್ಡೆಯ ಪೇರಡ್ಕ ಸಮೀಪದ ರವಿ ಗಣೇಶ್ ಅವರು ಪೇರಡ್ಕ ಸಮೀಪ ಬಸ್ ಏರಿದ್ದರು. ನಿರ್ವಾಹಕ ಟಿಕೆಟ್ ಕೇಳುವ ವೇಳೆ ವಿದ್ಯಾರ್ಥಿ ಬಸ್ ಪಾಸ್ನ ನಕಲು ಪ್ರತಿ ತೋರಿಸಿದ್ದ. ನಕಲು ಬಸ್ ಪಾಸ್ ಪ್ರತಿ ಇರಿಸಿಕೊಳ್ಳುವುದು ಕಾನೂನು ರೀತಿಯಲ್ಲಿ ಅಪರಾಧ ಎಂದು ಹೇಳಿದ ನಿರ್ವಾಹಕ ವಿದ್ಯಾರ್ಥಿಯ ಕಾಲೇಜು ಗುರುತು ಚೀಟಿಯನ್ನು ಪಡೆದು ವಿದ್ಯಾರ್ಥಿಯನ್ನು ಕಡಬ ಠಾಣೆಗೆ ಬರುವಂತೆ ತಿಳಿಸಿದ್ದಾರೆ.
ಕಾಲೇಜಿನಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆಗೆ ತಡವಾಗುತ್ತಿರುವ ಬಗ್ಗೆ ವಿದ್ಯಾರ್ಥಿ ಹೇಳಿದರೂ ನಿರ್ವಾಹಕ ಆತನನ್ನು ಕೈಯಲ್ಲಿ ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸಹಪಾಠಿಗಳು ದೂರಿದ್ದಾರೆ. ಆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಡಬದ ಬಸ್ ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಪರೀಕ್ಷೆ ಇರುವ ಬಗ್ಗೆ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ಮನವರಿಕೆ ಮಾಡಿದ ಬಳಿಕ ಕಾಲೇಜಿನ ಗುರುತು ಚೀಟಿ ಪಡೆದು ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ.
ಈ ಹಿಂದೆ ಬಸ್ ಪಾಸ್ ಕಳೆದು ಹೋಗಿ ಎರಡು ದಿನಗಳ ಬಳಿಕ ಸಿಕ್ಕಿತ್ತು. ಆ ಸಂದರ್ಭದಲ್ಲಿ ಕಲರ್ ಜೆರಾಕ್ಸ್ನಲ್ಲಿ ಬಸ್ ಪಾಸ್ನ ನಕಲು ಪ್ರತಿ ಮಾಡಿ ತುರ್ತು ಸಂದರ್ಭಬಳಸುವ ಸಲುವಾಗಿ ಬ್ಯಾಗ್ನಲ್ಲಿ ಇರಿಸಿಕೊಂಡಿದ್ದೆ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.