ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ನೆಲ್ಯಾಡಿ ಪೊಲೀಸರು
ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿರುವುದಾಗಿ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ವ್ಯವಸ್ಥಾಪಕಿ ಚೈತನ್ಯ ಸಿ.ಹೆಚ್. ಎಂಬವರು ನೀಡಿದ ದೂರಿನ ಮೇರೆಗೆ ನೆಲ್ಯಾಡಿ ನಿವಾಸಿ ಸೆಬಾಸ್ಟಿಯನ್ ಹಾಗೂ ಕೇರಳ ಮೂಲದ ಡಾನಿಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ನೆಲ್ಯಾಡಿ ಗ್ರಾಮದ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ಜ.27ರಂದು ಮಧ್ಯಾಹ್ನ ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದಂತಹ 916 ಹಾಲ್ ಮಾರ್ಕ್ ಇರುವ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡವಿಟ್ಟು, ಸಹಕಾರ ಸಂಘದಿಂದ ರೂ.1.40 ಲಕ್ಷ ಪಡೆದು ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ದೂರಿನಂತೆ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 16 /2024 ಕಲಂ: 406,420, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಹಲವು ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಈ ರೀತಿಯಾಗಿ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದು ಬರಬೇಕಾಗಿದೆ.